ನಾಂದೇಡ್: ಪ್ರೀತಿಗೆ ಜಾತಿ ಅಡ್ಡಿ.. ಮರ್ಯಾದಾ ಹತ್ಯೆ ಬಳಿಕ ಸಾವಿಗೀಡಾದ ಯುವಕನ ಶವವನ್ನೇ ಮದುವೆಯಾಗಿದ್ದ ಯುವತಿ ಅಂಚಲ್, ನಮ್ಮ ಕುಟುಂಬವೇ ದ್ರೋಹವೆಸಗಿದ್ದು, ಅವರನ್ನು ಜೈಲಿಗಟ್ಟದೇ ಬಿಡುವುದಿಲ್ಲ' ಎಂದು ಆಕ್ರೋಶ ಭರಿತರಾಗಿ ಹೇಳಿದ್ದಾರೆ.
ಮಹಾರಾಷ್ಟ್ರದ ನಾಂದೇಡ್‌ನಲ್ಲಿ ನಡೆದಿದ್ದ ಅಂತರ್ಜಾತಿ ಪ್ರೇಮ ಸಂಬಂಧ ಮತ್ತು ಹತ್ಯೆ ಪ್ರಕರಣದ ಸಂತ್ರಸ್ಥೆ ಅಂಚಲ್, ತಮ್ಮ ಕುಟುಂಬವೇ ನಮಗೆ ದ್ರೋಹ ಮಾಡಿದೆ.. ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಅಂತರ್ಜಾತಿ ಪ್ರೇಮ ಮತ್ತು ಪ್ರಿಯಕರನ ಹತ್ಯೆ ಬಳಿಕ ಆತನ ಶವದೊಂದಿಗೆ ವಿವಾಹವಾಗಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಯುವತಿ ಅಂಚಲ್ ಮಾಮಿದ್ವರ್ (21) ಇಂದು ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ವೇಳೆ, 'ನನ್ನ ಸಹೋದರರೇ ಸಕ್ಷಮ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ ಆಕೆ, 'ತನ್ನ ಕುಟುಂಬವು ಆರಂಭದಲ್ಲಿ ತನಗೆ ಮತ್ತು ಸಕ್ಷಮ್‌ಗೆ ತಮ್ಮ ಮದುವೆಯನ್ನು ಒಪ್ಪಿಕೊಳ್ಳುವುದಾಗಿ ಭರವಸೆ ನೀಡಿತ್ತು. ನಾವು ಮೂರು ವರ್ಷಗಳ ಕಾಲ ಒಟ್ಟಿಗೆ ಇದ್ದೆವು ಮತ್ತು ನಮ್ಮ ಜೀವನದ ಬಗ್ಗೆ ಅನೇಕ ಕನಸುಗಳನ್ನು ಕಂಡಿದ್ದೆವು. ನನ್ನ ಸಹೋದರರು ನಮಗೆ ಮದುವೆ ಮಾಡುವುವುದಾಗಿ ಭರವಸೆ ನೀಡಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಅವರು ನಮಗೆ ದ್ರೋಹ ಮಾಡಿದರು' ಎಂದು ಹೇಳಿದರು.
ಇನ್ ಸ್ಟಾಗ್ರಾಮ್ ಸ್ನೇಹ
ಇದೇ ವೇಳೆ ಅಂಚಲ್ ತಮ್ಮ ಮತ್ತು ಸಕ್ಷಮ್ ರ ಪ್ರೇಮ ವಿಚಾರದ ಕುರಿತು ಮಾತನಾಡಿದ್ದು, 'ನಾನು ಸಕ್ಷಮ್ ರನ್ನು ಇನ್ ಸ್ಟಾಗ್ರಾಮ್ ನಲ್ಲಿ ನೋಡಿದ್ದೆ. ಅಲ್ಲಿ ನಮ್ಮಿಬ್ಬರಿಗೂ ಪರಿಚಯವಾಗಿತ್ತು. ಬಳಿಕ ಅದು ಸ್ನೇಹದಿಂದ ಪ್ರೀತಿಗೆ ತಿರುಗಿತ್ತು. ಕೆಲ ತಿಂಗಳ ಬಳಿಕ ನಮ್ಮ ಕುಟುಂಕ್ಕೂ ನಮ್ಮ ಪ್ರೀತಿ ವಿಚಾರ ತಿಳಿಯಿತು. ಅವರೂ ಕೂಡ ಆರಂಭದಲ್ಲಿ ಬೇಡ ಎಂದು ಹೇಳಿದರಾದರೂ ಬಳಿಕ ಸಕ್ಷಮ್ ಜೊತೆ ಉತ್ತಮವಾಗಿಯೇ ಮಾತನಾಡುತ್ತಿದ್ದರು. ಸಕ್ಷಮ್ ಕೂಡ ನಮ್ಮ ಮನೆಗೆ ಬರುತ್ತಿದ್ದ. ಮನೆಯವರೊಂದಿಗೆ ಸೇರಿ ಊಟ ಮಾಡುತ್ತಿದ್ದ. ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ನನ್ನ ಸಹೋದರರು ಆತನನ್ನು ಕೊಂದು ಹಾಕಿದ್ದಾರೆ ಎಂದು ಅಂಚಲ್ ಅಳಲು ತೋಡಿಕೊಂಡಿದ್ದಾರೆ.
ಸಕ್ಷಮ್ ನಮ್ಮ ಜಾತಿಯವನಲ್ಲ ಎಂಬ ಕಾರಣಕ್ಕೇ ಆತನನ್ನು ಹೊಡೆದು ಕೊಂದಿದ್ದಾರೆ. ಈ ಹಿಂದೆ ನಮ್ಮ ತಂದೆ ಸಕ್ಷಮ್ ನನ್ನನ್ನು ಮದುವೆಯಾಗಲು ಆತ ನಮ್ಮ ಜಾತಿ ಮತ್ತು ಧರ್ಮಕ್ಕೆ ಬರಬೇಕು ಎಂದು ಹೇಳಿದ್ದರು. ಅದಕ್ಕೆ ಆತ ಕೂಡ ಒಪ್ಪಿಕೊಂಡಿದ್ದ. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ ಎಂದು ಹೇಳಿದ್ದಾರೆ.
ಕೊಲೆ ಹಿಂದೆ ಪೊಲೀಸರ ಕೈವಾಡ
ಇನ್ನು ಇದೇ ವೇಳೆ ಸಕ್ಷಮ್ ಕೊಲೆ ಹಿಂದೆ ಇಬ್ಬರು ಪೊಲೀಸರ ಪಾತ್ರವಿದೆ ಎಂದೂ ಆರೋಪಿಸಿರುವ ಅಂಚಲ್, ಧೀರಜ್ ಕೋಮಲ್ವಾರ್ ಮತ್ತು ಮಹಿತ್ ಅಸರ್ವರ್ ಎಂಬ ಇಬ್ಬರು ಪೊಲೀಸರು ತನ್ನ ಸಹೋದರರನ್ನು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕಿರಿಯ ಸಹೋದರ ಪೊಲೀಸ್ ಠಾಣೆಗೆ ಕರೆದೊಯ್ದು ಸಕ್ಷಮ್ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವಂತೆ ಕೇಳಿಕೊಂಡಿದ್ದ.
ಅದೇ ದಿನ ಪೊಲೀಸರು ನನ್ನ ಸಹೋದರರನ್ನು ಸಕ್ಷಮ್ ಕೊಲ್ಲಲು ಪ್ರಚೋದಿಸಿದ್ದರು. ನಿನ್ನ ಸಹೋದರಿಯ ಪ್ರಿಯಕರನನ್ನು ಏಕೆ ಕೊಲ್ಲಬಾರದು ಎಂದು ಹೇಳಿದ್ದರು. ಇದಕ್ಕೆ ನನ್ನ ಸಹೋದರರೂ ಕೂಡ ಸಂಜೆಯೊಳಗೆ ಆತನ ಕತೆ ಮುಗಿಸುತ್ತೇವೆ ಎಂದು ಹೇಳಿದ್ದರು ಎಂದಿದ್ದಾರೆ.
ಜಗಳ ತೆಗೆದು ಕೊಂದು ಮುಗಿಸಿದ್ದ ಸಹೋದರರು
ಬಳಿಕ ಗುರುವಾರ ಸಂಜೆ, ಅಂಚಲ್ ಸಹೋದರರಾದ ಹಿಮೇಶ್ ಮಾಮಿದ್ವರ್ ಈ ವಿಚಾರವಾಗಿ ಜಗಳ ತೆಗೆದಿದ್ದಾರೆ. ಸಕ್ಷಮ್ ಜೊತೆ ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ಈ ವೇಳೆ ಹಿಮೇಶ್ ಸಕ್ಷಮ್‌ಗೆ ಗುಂಡು ಹಾರಿಸಿ ಆತನ ಪಕ್ಕೆಲುಬುಗಳಿಗೆ ಹೊಡೆದಿದ್ದಾನೆ. ನಂತರ ಅವನು ಅವರ ತಲೆಗೆ ಟೈಲ್‌ನಿಂದ ಹೊಡೆದಾಗ ಸಕ್ಷಮ್ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಈ ಕೊಲೆ ಪ್ರಕರಣ ಸಂಬಂಧ ಅಂಚಲ್ ರ ಸಹೋದರರಾದ ಹಿಮೇಶ್, ಸಾಹಿಲ್ ಮತ್ತು ಅವರ ತಂದೆ ಗಜಾನನ್ ಮಾಮಿದ್ವರ್ ಮತ್ತು ಇತರ ಮೂವರನ್ನು ಬಂಧಿಸಲಾಗಿದೆ. ಎಲ್ಲರ ವಿರುದ್ಧ ಬಿಎನ್‌ಎಸ್, ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಕೊಲೆ, ಕಾನೂನುಬಾಹಿರ ಸಭೆ ಮತ್ತು ಗಲಭೆ ಸೇರಿದಂತೆ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಅಂತ್ಯಕ್ರಿಯೆಯಲ್ಲಿ ಮದುವೆ
ಮರುದಿನ, ಸಕ್ಷಮ್ ಅವರ ಅಂತ್ಯಕ್ರಿಯೆ ನಡೆಯುವಾಗ, ಅಂಚಲ್ ಅಲ್ಲಿಗೆ ತೆರಳಿದ್ದಾರೆ. ಈ ವೇಳೆ ಸಕ್ಷಮ್ ಮೃತದೇಹ ನೋಡಿ ದುಃಖದಿಂದ ಗೋಳಾಡಿದ ಅಂಚಲ್ ಅತನ ಮೃತದೇಹವನ್ನು ವಿವಾಹವಾಗಿದ್ದಾರೆ. ಆತನ ಅಂತ್ಯಕ್ರಿಯೆಗೆ ತರಲಾಗಿದ್ದ ಸಿಂಧೂರ, ಅರಶಿಣವನ್ನು ಧರಿಸಿ ಮಾಂಗಲ್ಯಧಾರಣೆ ಮಾಡಿಕೊಂಡು ಸಕ್ಷಮ್ ಮೃತದೇಹವನ್ನು ವಿವಾಹವಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಕುಟುಂಬಸ್ಥರೇ ಆದರೂ ಅವರು ಅಪರಾಧಿಗಳು.. ಶಿಕ್ಷೆಯಾಗಲೇಬೇಕು
ಇನ್ನು ಇದೇ ವೇಳೆ ಸಕ್ಷಮ್ ನನ್ನು ಕೊಂದ ತಮ್ಮ ಕುಟುಂಬಸ್ಥರು ಅಪರಾಧಿಗಳು ಎಂದು ಹೇಳಿರುವ ಅಂಚಲ್ ಅವರಿಗೆ ಶಿಕ್ಷೆಯಾಗಲೇಬೇಕು ಎಂದು ಆಗ್ರಹಿಸಿದ್ದಾರೆ. 'ನಾನು ಈಗ ಸಕ್ಷಮ್ ಪತ್ನಿ.. ಅವರ ಕುಟುಂಬದೊಂದಿಗೆ ನಾನಿದ್ದೇನೆ.. ಅವರಿಗೆ ನ್ಯಾಯ ಸಿಗುತ್ತದೆ. ಜಾತಿಯ ಆಧಾರದ ಮೇಲೆ ಜನರನ್ನು ಕೊಲ್ಲಬಾರದು. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗುತ್ತದೆ. ನನಗೆ ನ್ಯಾಯ ಬೇಕು. ಆರೋಪಿಯನ್ನು ಗಲ್ಲಿಗೇರಿಸಬೇಕೆಂದು ನಾನು ಬಯಸುತ್ತೇನೆ' ಎಂದು ಅಂಚಲ್ ಆಗ್ರಹಿಸಿದ್ದಾರೆ.