ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮಿತಿ ಮೀರಿದ ವಾಯು ಮಾಲಿನ್ಯದ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ಮಧ್ಯೆ, ಡಿಎಂಕೆ ರಾಜ್ಯಸಭಾ ಸದಸ್ಯ ಪಿ ವಿಲ್ಸನ್ ಅವರು ಬುಧವಾರ ದೆಹಲಿಯನ್ನು "ಗ್ಯಾಸ್ ಚೇಂಬರ್" ಎಂದು ಟೀಕಿಸಿದ್ದಾರೆ.
ಈ ಗರಿಷ್ಠ ವಾಯು ಮಾಲಿನ್ಯದ ಅವಧಿಯಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನ ಮುಂದುವರೆಸುವುದನ್ನು ಮರುಪರಿಶೀಲಿಸುವಂತೆ ಡಿಎಂಕೆ ಸಂಸದ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ನೀರು(ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ, 2024 ಅನ್ನು ಮಣಿಪುರಕ್ಕೆ ವಿಸ್ತರಿಸುವ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ವಿಲ್ಸನ್, ಮಾಲಿನ್ಯವು ಇನ್ನು ಮುಂದೆ ಕೇವಲ "ಕಾನೂನುಬದ್ಧ ಕಾಳಜಿ" ಅಲ್ಲ. ಬದಲಾಗಿ "ರಾಷ್ಟ್ರೀಯ ತುರ್ತುಸ್ಥಿತಿ"ಯಾಗಿದೆ ಎಂದು ಹೇಳಿದರು.
"ಇಲ್ಲಿಯಷ್ಟು ವಾಯು ಮಾಲಿನ್ಯ ಬೇರೆ ಯಾವ ನಗರದಲ್ಲೂ ಇಲ್ಲ. ದೆಹಲಿ ಗ್ಯಾಸ್ ಚೇಂಬರ್ ಆಗಿ ಮಾರ್ಪಟ್ಟಿದೆ" ಎಂದರು.
"ವಾಯು ಮಾಲಿನ್ಯ ಜನರ ಉಸಿರುಗಟ್ಟಿಸುತ್ತಿರುವಾಗ ಸಂಸತ್ತು ಮೌನವಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ. 2025 ರಲ್ಲಿ, ದೆಹಲಿಯು WHOನ ಸುರಕ್ಷಿತ ಮಾನದಂಡಗಳಿಗೆ ಹೊಂದಿಕೆಯಾಗುವ ಒಂದೇ ಒಂದು ದಿನವನ್ನು ನೋಡಿಲ್ಲ. ಮಾಲಿನ್ಯದಿಂದಾಗಿ ದೆಹಲಿ ಜನರ ಜೀವಿತಾವಧಿ ಎಂಟು ವರ್ಷಗಳಿಗೂ ಹೆಚ್ಚು ಕಡಿಮೆಯಾಗುತ್ತಿದೆ" ಎಂದು ವಿಲ್ಸನ್ ಹೇಳಿದರು.
ನೆರೆಯ ಹರಿಯಾಣ ಮತ್ತು ಪಂಜಾಬ್‌ನಲ್ಲಿ ಕೃಷಿ ತ್ಯಾಜ್ಯ ಸುಡುವುದು ದೆಹಲಿಯ ಮಾಲಿನ್ಯಕ್ಕೆ ಏಕೈಕ ಕಾರಣವಲ್ಲ ಎಂದ ಡಿಎಂಕೆ ಸಂಸದ, ವಾಹನಗಳ ಹೊರಸೂಸುವ ಹೊಗೆಯು "ಏಕೈಕ ದೊಡ್ಡ ಕಾರಣ" ಎಂದರು.
ಈ ಮಾಲಿನ್ಯಕ್ಕೆ "ಅತಿಯಾದ ಕೇಂದ್ರೀಕರಣ" ಕಾರಣ ಎಂದು ಆರೋಪಿಸಿದ ಅವರು, ಈ ದೇಶದಲ್ಲಿ, ಎಲ್ಲಾ ಕೆಲಸಗಳನ್ನು ದೆಹಲಿಯಿಂದಲೇ ಏಕೆ ಮಾಡಬೇಕು?. 2025 ರಲ್ಲೂ ಸರ್ಕಾರವು 1950 ರಲ್ಲಿ ಮಾಡಿದ ರೀತಿಯಲ್ಲಿ ಕೆಲಸ ಮಾಡುವ ಅಗತ್ಯವಿಲ್ಲ" ಎಂದರು.
ಗರಿಷ್ಠ ಮಾಲಿನ್ಯದ ದಿನಗಳಲ್ಲಿ ಚಳಿಗಾಲದ ಅಧಿವೇಶನವನ್ನು ನಡೆಸುವ ಅಗತ್ಯವಿದೆಯೇ ಎಂದು ಡಿಎಂಕೆ ಸಂಸದ ಪ್ರಶ್ನಿಸಿದರು ಮತ್ತು ಈ ಚರ್ಚೆಗಳನ್ನು ಇತರ ಅಧಿವೇಶನಗಳಲ್ಲಿ ಮಾಡಬಹುದು ಎಂದು ಸೂಚಿಸಿದರು.