ತಿರುವನಂತಪುರಂ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರನ್ನು ಬೇರೆ ದಾರಿಯಿಲ್ಲದೆ ಕೇರಳದ ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಲಾಗಿದೆ.
ತಿರುವನಂತಪುರಂ ಪ್ರಧಾನ ಸೆಷನ್ಸ್ ನ್ಯಾಯಾಲಯ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಅವರನ್ನು ಬಂಧಿಸದಂತೆ ತಡೆ ನೀಡಲು ನ್ಯಾಯಾಲಯ ನಿರಾಕರಿಸಿದೆ.
ರಾಹುಲ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್ ಹೇಳಿದ್ದಾರೆ. ಪಾಲಕ್ಕಾಡ್ ಶಾಸಕರ ವಿರುದ್ಧ ಹೆಚ್ಚುತ್ತಿರುವ ದೂರುಗಳು ಮತ್ತು ಬಾಕಿ ಇರುವ ಪ್ರಕರಣಗಳ ಹಿನ್ನೆಲೆಯಲ್ಲಿ ಎಐಸಿಸಿ ಅನುಮೋದನೆಯೊಂದಿಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್ ಮತ್ತು ಯುಡಿಎಫ್ ಸಂಚಾಲಕ ಅಡೂರ್ ಪ್ರಕಾಶ್ ಇಬ್ಬರೂ ರಾಹುಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದರು.ಮಾಜಿ ಕೆಪಿಸಿಸಿ ಅಧ್ಯಕ್ಷರಾದ ವಿ.ಎಂ. ಸುಧೀರನ್ ಮತ್ತು ಕೆ. ಮುರಳೀಧರನ್ ಸೇರಿದಂತೆ ಹಲವಾರು ಹಿರಿಯ ನಾಯಕರು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.
ಬುಧವಾರವೇ ಉಚ್ಚಾಟನೆಯನ್ನು ನಿರೀಕ್ಷಿಸಲಾಗಿತ್ತು, ಆದರೆ ಪಕ್ಷದ ಕೆಲವು ನಾಯಕರು ನ್ಯಾಯಾಲಯದ ನಿರ್ಧಾರಕ್ಕಾಗಿ ಕಾಯಲು ಆದ್ಯತೆ ನೀಡಿದ್ದರು ಎನ್ನಲಾಗಿದೆ. ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ, ಗುರುವಾರ ನಾಯಕರು ಒಮ್ಮತ ನಿರ್ಧಾರಕ್ಕೆ ಬಂದಿದ್ದಾಗಿ ತಿಳಿದುಬಂದಿದೆ.