ನವದೆಹಲಿ: 'ಹಾರುವ ಕೋಟೆ' ಎಂದೇ ಕರೆಯಲಾಗುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವಿಮಾನ 'Flying Kremlin' ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್ ಮಾಡಲಾದ ವಿಮಾನ ಎಂದು ಹೇಳಲಾಗಿದೆ.
2 ದಿನಗಳ ಭಾರತ ಪ್ರವಾಸಕ್ಕೆ ದೆಹಲಿಗೆ ಆಗಮಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ಮಾಸ್ಕೋದಿಂದ ದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಖುದ್ಧು ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಪುಟಿನ್ ರನ್ನು ಆತ್ಮೀಯರಾಗಿ ಸ್ವಾಗತಿಸಿದರು.
ಇನ್ನು ದೆಹಲಿಗೂ ಆಗಮಿಸುವ ಮುನ್ನ ಪುಟಿನ್ ಪ್ರಯಾಣಿಸುತ್ತಿದ್ದ ಅತ್ಯಂತ ಸುರಕ್ಷಿತ ವಿಮಾನ ಎಂದು ಹೇಳಲಾಗುವ 'Flying Kremlin' ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್ ಮಾಡಲಾದ ವಿಮಾನ ಎಂದು ಹೇಳಲಾಗಿದೆ.
ಈ ಕುರಿತು ಫ್ಲೈಟ್ ರಾಡಾರ್ 24 ವೆಬ್ ಸೈಟ್ ವರದಿ ಮಾಡಿದ್ದು, ಇಂದು ಮುಂಜಾನೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್ ಮಾಡಲಾದ ವಿಮಾನವಾಗಿತ್ತು ಎಂದು ಹೇಳಿದೆ.
"ನಮ್ಮ ಈಗಿನ ಅತ್ಯಂತ ಟ್ರ್ಯಾಕ್ ಮಾಡಲಾದ ವಿಮಾನ 'Flying Kremlin' ಆಗಿದ್ದು, ಭಾರತಕ್ಕೆ ಹೋಗುವ ಮಾರ್ಗದಲ್ಲಿ ರಷ್ಯಾ ಸರ್ಕಾರಿ ವಿಮಾನ ಅತ್ಯಂತ ಟ್ರ್ಯಾಕ್ ಮಾಡಲಾದ ವಿಮಾನವಾಗಿದೆ. ರಷ್ಯಾದ ಅಧ್ಯಕ್ಷ ಪುಟಿನ್ ಮತ್ತು ಭಾರತದ ಪ್ರಧಾನಿ ಮೋದಿ ದೆಹಲಿಯಲ್ಲಿ ಎರಡು ದಿನಗಳ ಕಾಲ ಭೇಟಿಯಾಗಲಿದ್ದಾರೆ" ಎಂದು ವಿಮಾನ ಟ್ರ್ಯಾಕರ್ ಎಕ್ಸ್ ಮತ್ತು ಅದರ ವೆಬ್‌ಸೈಟ್ ಪೋಸ್ಟ್‌ನಲ್ಲಿ ತಿಳಿಸಿದೆ.
'ಹಾರುವ ಕೋಟೆ' ಎಂದೇ ಕರೆಯಲಾಗುವ 'Flying Kremlin' ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್ ಮಾಡಲಾದ ವಿಮಾನವಾಗಿದೆ.
ಈ ಎರಡು ವಿಮಾನಗಳನ್ನು ಮೊದಲೇ ಗುರುತಿಸಲಾಯಿತು. ಒಂದು ತನ್ನ ಟ್ರಾನ್ಸ್‌ಪಾಂಡರ್ ಅನ್ನು ಆಫ್ ಮಾಡಿದರೆ, ಇನ್ನೊಂದು ಅದನ್ನು ಆನ್ ಮಾಡಿತು. ಈ ವ್ಯವಸ್ಥೆ ಮಾರ್ಗದ ಉದ್ದಕ್ಕೂ ಮುಂದುವರೆದಿತ್ತು. ಟ್ರಾನ್ಸ್‌ಪಾಂಡರ್ ವಿಮಾನ ನಿರ್ದೇಶಾಂಕಗಳು ಮತ್ತು ಇತರ ಪ್ರಮುಖ ಹಾರಾಟದ ಮಾಹಿತಿಯನ್ನು ವಾಯು ಸಂಚಾರ ನಿಯಂತ್ರಕಗಳಿಗೆ ಕಳುಹಿಸುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಏನಿದು ಹಾರುವ ಕ್ರೆಮ್ಲಿನ್?
ವಿಶ್ವದ ಅತ್ಯಂತ ಪ್ರಬಲ ಮತ್ತು ಪ್ರಭಾವಿ ನಾಯಕರಲ್ಲಿ ಅಗ್ರಗಣ್ಯರಾಗಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಾಮಾನ್ಯವಾಗಿ ಅತ್ಯಂತ ವಿರಳವಾಗಿ ರಷ್ಯಾದಿಂದ ಹೊರಗೆ ಪ್ರಯಾಣಿಸುತ್ತಾರೆ. ಒಂದು ವೇಳೆ ಅವರು ರಷ್ಯಾದಿಂದ ಹೊರಗೆ ಪ್ರಯಾಣಿಸಿದರೆ ಅವರ ಹಿಂದೆ ಒಂದು ಸೇನೆಯೇ ಪ್ರಯಾಣಿಸುತ್ತದೆ.
ಪುಟಿನ್ ವಿದೇಶಗಳಿಗೆ ಪ್ರಯಾಣಿಸಲು ಆರಸ್ ಸೆನಾಟ್ ಶಸ್ತ್ರಸಜ್ಜಿತ ಲಿಮೋಸಿನ್ ಮತ್ತು ಅವರ ಹೆಚ್ಚು ಕಸ್ಟಮೈಸ್ ಮಾಡಿದ ಅಧ್ಯಕ್ಷೀಯ ವಿಮಾನ, ಇಲ್ಯುಶಿನ್ IL-96-300PU ನಲ್ಲಿ ಪ್ರಯಾಣಿಸುತ್ತಾರೆ. ಇದನ್ನು ಹಾರುವ ಕ್ರೆಮ್ಲಿನ್ ಎಂದು ಕರೆಯುತ್ತಾರೆ.
ಅಂದಹಾಗೆ ಈ IL-96-300 ವಿಮಾನದ ಮಾರ್ಪಡಿಸಿದ ಆವೃತ್ತಿಯಾಗಿದ್ದು, ಇದು 1980ರ ದಶಕದಲ್ಲಿ ಇಲ್ಯುಶಿನ್ ಡಿಸೈನ್ ಬ್ಯೂರೋ ಅಭಿವೃದ್ಧಿಪಡಿಸಿದ ದೀರ್ಘ-ಶ್ರೇಣಿಯ, ನಾಲ್ಕು ಎಂಜಿನ್‌ಗಳ ರಷ್ಯಾದ ವಿಮಾನವಾಗಿದೆ. ಇದು ಮೊದಲು ಸೆಪ್ಟೆಂಬರ್ 28, 1988 ರಂದು ತನ್ನ ಮೊದಲ ಹಾರಾಟ ನಡೆಸಿತ್ತು. ಬಳಿಕ 1990 ರ ದಶಕದ ಆರಂಭದಲ್ಲಿ ರಷ್ಯಾ ಅಧ್ಯಕ್ಷರ ಸೇವೆಗೆ ಪ್ರವೇಶಿಸಿತು.