ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ 'ಬಾಬರಿ ಮಸೀದಿ' ನಿರ್ಮಿಸುವುದಾಗಿ ವಿವಾದದ ಬಿರುಗಾಳಿ ಎಬ್ಬಿಸಿದ್ದ ಭರತ್‌ಪುರ ಶಾಸಕ ಹುಮಾಯೂನ್ ಕಬೀರ್ ಅವರನ್ನು ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಗುರುವಾರ ಅಮಾನತು ಮಾಡಿದೆ.
ಪಕ್ಷದ ಆಂತರಿಕ ವ್ಯವಹಾರಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ವಿವಾದಾತ್ಮಕ ಹೇಳಿಕೆಗಳಿಂದ ಕಳೆದ ಕೆಲವು ವರ್ಷಗಳಿಂದ ಗಮನ ಸೆಳೆದಿರುವ ಕಬೀರ್, ಡಿಸೆಂಬರ್ 6 ರಂದು ಬೆಲ್ದಂಗಾದಲ್ಲಿ ಬಾಬರಿ ಮಸೀದಿಗೆ ಅಡಿಪಾಯ ಹಾಕಲಾಗುವುದು ಎಂದು ಘೋಷಿಸಿದ್ದರು.
ಪಕ್ಷವು ರಾಜ್ಯದಲ್ಲಿ ಶಾಂತಿ ಮತ್ತು ಕೋಮು ಸಾಮರಸ್ಯವನ್ನು ಕಾಪಾಡಿಕೊಳ್ಳಲು ಕೆಲಸ ಮಾಡುತ್ತಿರುವ ಸಮಯದಲ್ಲಿ ಕಬೀರ್ ಅವರ ನಡವಳಿಕೆಯು ತೀವ್ರ ಅಶಿಸ್ತಿನ ಕೃತ್ಯವಾಗಿದೆ ಎಂದು ಅಮಾನತು ಘೋಷಣೆಯನ್ನು ಪ್ರಕಟಿಸಿದ ಪಕ್ಷದ ಹಿರಿಯ ನಾಯಕ ಫಿರ್ಹಾದ್ ಹಕೀಮ್ ಹೇಳಿದ್ದಾರೆ.
ಕಬೀರ್ ಕೋಮು ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದು, ಇದನ್ನು ಟಿಎಂಸಿ ತೀವ್ರವಾಗಿ ವಿರೋಧಿಸುತ್ತದೆ. ಟಿಎಂಸಿ ಕೋಮು ರಾಜಕೀಯದಲ್ಲಿ ನಂಬಿಕೆ ಇಡುವುದಿಲ್ಲ. ಈ ಕ್ಷಣದಿಂದ ಅವರಿಗೆ ಪಕ್ಷದೊಂದಿಗೆ ಯಾವುದೇ ಸಂಬಂಧವಿರುವುದಿಲ್ಲ. ನಮ್ಮ ಉನ್ನತ ನಾಯಕತ್ವದ ಸೂಚನೆಯ ಮೇರೆಗೆ ಅವರನ್ನು ಅಮಾನತುಗೊಳಿಸಲಾಗುತ್ತಿದೆ" ಎಂದು ಅವರು ತಿಳಿಸಿದ್ದಾರೆ.
ಹಕೀಮ್ ಪ್ರತಿಕ್ರಿಯೆ ಕುರಿತು ಪ್ರತಿಕ್ರಿಯಿಸಿದ ಕಬೀರ್, ರಾಜೀನಾಮೆ ನೀಡಿ ಹೊಸ ರಾಜಕೀಯ ಪಕ್ಷವನ್ನು ರಚಿಸುವುದಾಗಿ ಹೇಳಿದ್ದಾರೆ. ಡಿಸೆಂಬರ್ 6 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಸೇರುತ್ತಾರೆ ಎಂದು ಅವರು ಈ ಹಿಂದೆ ಹೇಳಿಕೊಂಡಿದ್ದರು.