ರಾಮನಾಥಪುರಂ: ತಮಿಳುನಾಡಿನ ರಾಮನಾಥಪುರಂ ಬಳಿ ಶನಿವಾರ ಬೆಳಗ್ಗೆ ಪೂರ್ವ ಕರಾವಳಿ ರಸ್ತೆಯಲ್ಲಿ ನಿಂತಿದ್ದ ವಾಹನಕ್ಕೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದ್ದು, ಭೀಕರ ಅಪಘಾತದಲ್ಲಿ ಆಂಧ್ರಪ್ರದೇಶದ ಐವರು ಶಬರಿಮಲೆ ಅಯ್ಯಪ್ಪಸ್ವಾಮಿ ಭಕ್ತರು ಸಾವನ್ನಪ್ಪಿದ್ದು, ಏಳು ಜನ ಗಾಯಗೊಂಡಿದ್ದಾರೆ.
ಪೊಲೀಸರ ಪ್ರಕಾರ, ಶಬರಿಮಲೆಯಿಂದ ಹಿಂತಿರುಗುತ್ತಿದ್ದ ವಿಜಯನಗರಂ ಜಿಲ್ಲೆಯ ಐದು ಪುರುಷರನ್ನು ಹೊತ್ತೊಯ್ಯುತ್ತಿದ್ದ ಕಾರು(ಎಪಿ 40 ಎಫ್‌ಕೆ 5781) ಇಂದು ಬೆಳಗಿನ ಜಾವ 1.50 ರ ಸುಮಾರಿಗೆ ರಸ್ತೆಬದಿಯಲ್ಲಿ ನಿಂತಿತ್ತು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ.
ಕೀಲಕರೈನ ನಾರ್ತ್ ಸ್ಟ್ರೀಟ್‌ನ ಮುಸ್ತಾಕ್ ಅಹಮ್ಮದ್(34) ಚಲಾಯಿಸುತ್ತಿದ್ದ ಕಾರು ಅತಿವೇಗದಲ್ಲಿ ಬಂದು ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿರುವುದಾಗಿ ರಾಮನಾಥಪುರಂ ಎಸ್‌ಪಿ ಜಿ. ಚಂಡೀಶ್ ಅವರು ಟಿಎನ್‌ಐಇಗೆ ತಿಳಿಸಿದ್ದಾರೆ.
ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರಲ್ಲಿ ಕಾರು ಚಾಲಕ ಮುಸ್ತಾಕ್ ಮತ್ತು ಆಂಧ್ರಪ್ರದೇಶದ ಮೂವರು ಯಾತ್ರಿಕರಾದ ರಾಮಚಂದ್ರ ರಾವ್(35), ಅಪ್ಪಾವು ನಾಯ್ಡು(35) ಮತ್ತು ಬಂಡಾರ ಚಂದ್ರು ರಾವ್ (45) ಎಂದು ಗುರುತಿಸಲಾಗಿದೆ. ಉಳಿದ ಯಾತ್ರಿಕರಾದ ರಾಮು(60) ಮತ್ತು ಶ್ರೀ ರಾಮ್ (40) ಅವರನ್ನು ರಾಮನಾಥಪುರಂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ರಾಮು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಇದರಿಂದಾಗಿ ಸಾವಿನ ಸಂಖ್ಯೆ ಐದಕ್ಕೆ ಏರಿತು.
ಮತ್ತೊಂದು ಕಾರಿನಲ್ಲಿ ಕೀಲಕರೈಗೆ ಹೋಗುತ್ತಿದ್ದ ಇತರ ಆರು ಮಂದಿ - ಫ್ರಿಝರ್ (20), ತಿವ್ಯಾನ್ (19), ಪ್ರವೀಣ್ (19), ಜಮೀಲ್ ರೆಹಮಾನ್ (15), ಮಾದೇಶ್ವರನ್ (ಗಂಭೀರ) ಮತ್ತು ಹರ್ಷತ್ (32) ಅವರಿಗೆ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕೀಲಕರೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.