ನವದೆಹಲಿ: ಇಂಡಿಗೋ ವಿಮಾನಗಳ ರದ್ದು ಮತ್ತು ವಿಳಂಬದಿಂದಾಗಿ ಪ್ರಯಾಣಿಕರು ಇತರೆ ವಿಮಾನಯಾನ ಸಂಸ್ಥೆಗಳ ಮೊರೆ ಹೋಗುತ್ತಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ಇತರೆ ಏರ್‌ಲೈನ್‌ಗಳು ಟಿಕೆಟ್ ದರ ಮನಬಂದಂತೆ ಹೆಚ್ಚಿಸಿರುವುದು ಕಂಡುಬಂದಿದೆ. ಪ್ರಯಾಣಿಕರ ಸುಲಿಗೆ ತಡೆಯಲು ಕೇಂದ್ರ ಸರ್ಕಾರ ಶನಿವಾರ ಮಧ್ಯಪ್ರವೇಶಿಸಿದ್ದು, 18 ಸಾವಿರ ರೂ. ಗರಿಷ್ಠ ದರವನ್ನು ನಿಗದಿಪಡಿಸಿದೆ.
ಈ ಸಮಸ್ಯೆಯನ್ನು "ಬಹಳ ಗಂಭೀರವಾಗಿ" ಪರಿಗಣಿಸಲಾಗಿದೆ ಮತ್ತು ಎಲ್ಲಾ ಮಾರ್ಗಗಳಲ್ಲಿ ನ್ಯಾಯಯುತ ಮತ್ತು ಸಮಂಜಸವಾದ ದರಗಳನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯವು ತನ್ನ ನಿಯಂತ್ರಕ ಅಧಿಕಾರಗಳನ್ನು ಬಳಸಿಕೊಂಡಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಹೊಸದಾಗಿ ನಿಗದಿಪಡಿಸಲಾದ ದರ ಮಿತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪರಿಸ್ಥಿತಿ ಸಂಪೂರ್ಣವಾಗಿ ಸ್ಥಿರವಾಗುವವರೆಗೆ ಈ ಮಿತಿಗಳು ಜಾರಿಯಲ್ಲಿರುತ್ತವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
"ಮಾರುಕಟ್ಟೆಯಲ್ಲಿ ಬೆಲೆ ಶಿಸ್ತನ್ನು ಕಾಯ್ದುಕೊಳ್ಳುವುದು, ಸಂಕಷ್ಟದಲ್ಲಿರುವ ಪ್ರಯಾಣಿಕರ ಶೋಷಣೆಯನ್ನು ತಡೆಯುವುದು ಮತ್ತು ಹಿರಿಯ ನಾಗರಿಕರು, ವಿದ್ಯಾರ್ಥಿಗಳು ಹಾಗೂ ರೋಗಿಗಳು ಸೇರಿದಂತೆ ತುರ್ತಾಗಿ ಪ್ರಯಾಣಿಸಬೇಕಾದ ನಾಗರಿಕರು ಈ ಅವಧಿಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗದಂತೆ ನೋಡಿಕೊಳ್ಳುವುದು ಈ ನಿರ್ದೇಶನದ ಉದ್ದೇಶವಾಗಿದೆ" ಎಂದು ಸಚಿವಾಲಯ ಹೇಳಿದೆ.
ನಾಗರಿಕ ವಿಮಾನಯಾನ ಸಚಿವಾಲಯದ ನಿರ್ದೇಶನದ ಪ್ರಕಾರ, ವಿಮಾನ ಪ್ರಯಾಣ ದರವನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ.
500 ಕಿ.ಮೀ.ವರೆಗಿನ ಪ್ರಯಾಣ ದರ 7,500 ರೂ.
500 ರಿಂದ 1,000 ಕಿ.ಮೀ.ಗಳಿಗೆ 12,000 ರೂ.
1,000 ರಿಂದ 1,500 ಕಿ.ಮೀ.ಗಳಿಗೆ 15,000 ರೂ.
1,500 ಕಿ.ಮೀ.ಗಳಿಗಿಂತ ಹೆಚ್ಚಿನ ಪ್ರಯಾಣಕ್ಕೆ 18,000 ರೂ. ದರ ಮಿತಿಗೊಳಿಸಲಾಗಿದೆ.
ಈ ದರಗಳು ವಿಮಾನ ನಿಲ್ದಾಣದ ಸುಂಕ ಮತ್ತು ತೆರಿಗೆಗಳನ್ನು ಹೊರತುಪಡಿಸಿವೆ ಮತ್ತು ಬ್ಯುಸಿನೆಸ್ ವರ್ಗದ ದರಗಳಿಗೆ ಮತ್ತು ಪ್ರಾದೇಶಿಕ ಸಂಪರ್ಕ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುವ ವಿಮಾನಗಳಿಗೆ ಈ ದರ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇಂಡಿಗೋ ಸಮಸ್ಯೆಯಿಂದ ಕೆಲ ವಿಮಾನಯಾನ ಸಂಸ್ಥೆಗಳ ಟಿಕೆಟ್‌ಗಳ ಬೆಲೆಯನ್ನು ಮೂರುಪಟ್ಟು ಹೆಚ್ಚಿಸಿವೆ. ಭಾರತದಿಂದ ವಿದೇಶಕ್ಕೆ ಹೋಗುವ ಟಿಕೆಟ್ ದರಕ್ಕಿಂತಲೂ ದೇಶದ ಒಳಗಡೆ ಸಂಚರಿಸುವ ಟಿಕೆಟ್ ದರ ದುಬಾರಿಯಾಗಿದೆ ಎಂದು ವಿಮಾನ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದರು.