ನವದೆಹಲಿ: ಭಾರತದ ಬೆಳವಣಿಗೆಯ ದರದೊಂದಿಗೆ ಹಿಂದೂ ಧರ್ಮ ಜೋಡಿಸುವುದನ್ನು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.
ಹಿಂದೂ ಧರ್ಮದ ಅಪಖ್ಯಾತಿಗೆ ಯತ್ನ: ಹಿಂದೂಸ್ತಾನ್ ಟೈಮ್ಸ್ ಲೀಡರ್‌ಶಿಪ್ ಶೃಂಗಸಭೆಯ 23 ನೇ ಆವೃತ್ತಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೆಲವು ದಶಕಗಳ ಹಿಂದೆ ಭಾರತದ ನಿಧಾನಗತಿಯ ಬೆಳವಣಿಗೆಯನ್ನು ಹಿಂದೂ ಬೆಳವಣಿಗೆಯ ದರ ಎಂದು ಕರೆಯುವ ಮೂಲಕ ಹಿಂದೂ ಜೀವನ ವಿಧಾನವನ್ನು ಅಪಖ್ಯಾತಿಗೊಳಿಸುವ ಪ್ರಯತ್ನ ನಡೆದಿತ್ತು. ಜಗತ್ತು ಛಿದ್ರಗೊಂಡಾಗ, ಭಾರತವು ಸೇತುವೆ ಕಟ್ಟುವವನಾಗಿ ನಿಲ್ಲುತ್ತದೆ ಎಂದು ಹೇಳಿದರು.
ವಿಭಿನ್ನವಾಗಿ ಕಾಣುವ ಭಾರತ: ನಾವು 21 ನೇ ಶತಮಾನದ ಕಾಲುಭಾಗ ಮುಗಿದು ಹೋದ ಕಾಲದಲ್ಲಿದ್ದೇವೆ. ಜಗತ್ತು ಆರ್ಥಿಕ ಬಿಕ್ಕಟ್ಟು, ಜಾಗತಿಕ ಸಾಂಕ್ರಾಮಿಕ ರೋಗ ಸೇರಿದಂತೆ ಅನೇಕ ಏರಿಳಿತಗಳನ್ನು ಕಂಡಿದೆ. ಈ ಸನ್ನಿವೇಶಗಳು ಒಂದಲ್ಲ ಒಂದು ರೀತಿಯಲ್ಲಿ ಜಗತ್ತಿಗೆ ಸವಾಲು ಆಗಿದೆ. ಇಂದು ಜಗತ್ತು ಅನಿಶ್ಚಿತತೆಗಳಿಂದ ತುಂಬಿದೆ. ಆದರೆ ಇದರ ಮಧ್ಯೆ, ನಮ್ಮ ಭಾರತವು ವಿಭಿನ್ನವಾಗಿ ಕಾಣಿಸಿಕೊಳ್ಳುತ್ತದೆ. ಭಾರತ ಆತ್ಮವಿಶ್ವಾಸದಿಂದ ತುಂಬಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಸತ್ಯಾಸತ್ಯತೆ ಸಾಬೀತುಪಡಿಸಲು ಇದೊಂದೆ ಸಾಕು!
"ಜಗತ್ತು ನಿಧಾನಗತಿಯ ಬೆಳವಣಿಗೆ ಬಗ್ಗೆ ಮಾತನಾಡುವಾಗ, ಭಾರತ ಬೆಳವಣಿಗೆಯ ಕಥೆಗಳನ್ನು ಬರೆಯುತ್ತದೆ. ಜಗತ್ತು ವಿಶ್ವಾಸಾರ್ಹತೆಯ ಬಿಕ್ಕಟ್ಟನ್ನು ಎದುರಿಸಿದಾಗ ಭಾರತ ವಿಶ್ವಾಸಾರ್ಹತೆಯ ಸ್ತಂಭವಾಗುತ್ತದೆ ಎಂದರು. ಹಿಂದಿನ ಸರ್ಕಾರ ತಮ್ಮದೇ ಆದ ನಾಗರಿಕರ ಮೇಲೆ ನಂಬಿಕೆಯನ್ನು ಹೊಂದಿರಲಿಲ್ಲ. ನಮ್ಮ ಸರ್ಕಾರ ಆ ಕೆಲಸದ ವಿಧಾನವನ್ನು ಮುರಿದಿದೆ. ಸತ್ಯಾಸತ್ಯತೆ ಸಾಬೀತುಪಡಿಸಲು ನಾಗರಿಕರ ಸ್ವಯಂ-ಪ್ರಮಾಣೀಕೃತ ದಾಖಲೆಯೇ ಸಾಕು ಎಂದರು.
ನಾಗರಿಕರು ಸರ್ಕಾರದ ಮೇಲೆ ನಂಬಿಕೆ ಇಡುವುದು ಪ್ರಮುಖ ಅಂಶವಾಗಿದೆ. ದೇಶವನ್ನು ಪ್ರತಿಯೊಂದು ಮೂಲೆಯಿಂದಲೂ ವಸಾಹತುಶಾಹಿ ಮನಸ್ಥಿತಿಯಿಂದ ಮುಕ್ತಗೊಳಿಸಬೇಕು. ಮುಂದಿನ 10 ವರ್ಷಗಳ ಕಾಲ ನಾನು ಈ ದೂರದೃಷ್ಟಿಯೊಂದಿಗೆ ಜನರನ್ನು ಮುಂದೆ ಕೊಂಡೊಯ್ಯಲು ಬಯಸುತ್ತೇನೆ ಎಂದು ಪ್ರಧಾನಿ ಹೇಳಿದರು.
ಏನಿದು ಹಿಂದೂ ಬೆಳವಣಿಗೆ ದರ ವಿವಾದ: ಪಂಚ ವಾರ್ಷಿಕ ಯೋಜನೆಗಳು ಅನುಷ್ಟಾನಗೊಳ್ಳುತ್ತಿದ್ದ 1950-1980ರ ಅವಧಿಯಲ್ಲಿ ವಾರ್ಷಿಕ ಬೆಳವಣಿಗೆ ದರ ಶೇ. 3.5ರ ಮಿತಿಯಲ್ಲೇ ಇತ್ತು. ಕೆಲವೊಮ್ಮೆ ಅಪವಾದಕ್ಕೊ ಎನ್ನುವಂತೆ ಶೇ.4ಕ್ಕೆ ಏರಿದ್ದುಂಟು. ಇದೇ ಅವಧಿಯಲ್ಲಿ ತಲಾ ಆದಾಯದ ಬೆಳವಣಿಗೆ ದರ ಶೇ. 1.3ಕ್ಕೆ ಸೀಮಿತಗೊಂಡಿತ್ತು. 1978ರಲ್ಲಿ ಈ ವಿಶಿಷ್ಟ, ನಿರಾಶದಾಯಕ ಅನುಭವವನ್ನು ಯೋಜನಾ ಆಯೋಗದ ಸದಸ್ಯರಾಗಿದ್ದ ಆರ್ಥಿಕ ತಜ್ಞರಾಗಿದ್ದ ರಾಜಕೃಷ್ಣ 'ಹಿಂದೂ ಬೆಳವಣಿಗೆ ದರ' ಎಂದು ಕರೆದರು. ಬಡತನ ನಿವಾರಣೆಗೆ ಬೆಳವಣಿಗೆ ದರ ಹೆಚ್ಚಲೇಬೇಕೆಂದು ವಾದಿಸುತ್ತಿದ್ದ ಅವರು, ಕೇವಲ ವಿನೋದಕ್ಕಾಗಿ ಹಿಂದೂ ಬೆಳವಣಿಗೆ ದರದ ಪರಿಕಲ್ಪನೆ ಹರಿಬಿಟಿದ್ದು, ವಿವಾದಕ್ಕೆ ದಾರಿಯಾಗಿತ್ತು.