ಪುರಿ: ಒಡಿಶಾದ ಪುರಿಯಲ್ಲಿರುವ ಪ್ರಸಿದ್ಧ ಹಿಂದೂ ದೇವಾಲಯ ಜಗನ್ನಾಥ ದೇವಾಲಯವು 60, 426 ಎಕರೆ ಭೂಮಿಯನ್ನು ಹೊಂದಿದೆ ಎಂದು ಕಾನೂನು ಸಚಿವ ಪೃಥ್ವಿರಾಜ್ ಹರಿಚಂದನ್ ಶನಿವಾರ ವಿಧಾನಸಭೆಯಲ್ಲಿ ತಿಳಿಸಿದರು.
ವಿಧಾನಸಭೆಯಲ್ಲಿ ಬಿಜೆಡಿ ಶಾಸಕ ಸುದರ್ಶನ್ ಹರಿಪಾಲ್ ಅವರ ಲಿಖಿತ ಪ್ರಶ್ನೆಗೆ ಉತ್ತರಿಸಿದ ಹರಿಚಂದನ್, ಒಡಿಶಾ ಮಾತ್ರವಲ್ಲದೇ ಇತರ ಆರು ರಾಜ್ಯಗಳಲ್ಲಿ ಸುಮಾರು 400 ಹೆಕ್ಟೇರ್ ಭೂಮಿಯನ್ನು ಹೊಂದಿದೆ ಎಂದು ಮಾಹಿತಿ ನೀಡಿದರು.
1956 ರ ಜಗನ್ನಾಥ ದೇವಾಲಯ ಕಾಯ್ದೆಯ ಪ್ರಕಾರ, 12 ನೇ ಶತಮಾನದ ಪುರಿ ದೇವಾಲಯವನ್ನು ಕಾನೂನು ಇಲಾಖೆಯು ನಿರ್ವಹಿಸುತ್ತದೆ.
ಆರು ಜಿಲ್ಲೆಗಳಲ್ಲಿ ಜಮೀನು: ಒಡಿಶಾದ 24 ಜಿಲ್ಲೆಗಳಲ್ಲಿ ಜಗನ್ನಾಥ ದೇವರ ಹೆಸರಿನಲ್ಲಿ 60,426.943 ಎಕರೆ ಭೂಮಿ ಇದ್ದರೆ, ಆರು ರಾಜ್ಯಗಳಲ್ಲಿ 395.252 ಎಕರೆ ದೇವಾಲಯ ಭೂಮಿಯನ್ನು ಪತ್ತೆಹಚ್ಚಲಾಗಿದೆ. ಪಶ್ಚಿಮ ಬಂಗಾಳ (322.930 ಎಕರೆ), ಮಹಾರಾಷ್ಟ್ರ (28.21 ಎಕರೆ), ಮಧ್ಯಪ್ರದೇಶ (25.11 ಎಕರೆ), ಆಂಧ್ರಪ್ರದೇಶ (17.02 ಎಕರೆ), ಛತ್ತೀಸ್‌ಗಢ (1.7 ಎಕರೆ) ಮತ್ತು ಬಿಹಾರ (0.27 ಎಕರೆ) ದೇವಾಲಯದ ಭೂಮಿಯಿದೆ. 38,061.792 ಎಕರೆಗಳ ಪರಿಷ್ಕೃತ ಭೂ ದಾಖಲೆಗಳು ಪ್ರಸ್ತುತ ಪುರಿಯ ಜಗನ್ನಾಥ ದೇವಾಲಯ ಆಡಳಿತ (SJTA)ಬಳಿ ಇವೆ ಎಂದು ಸಚಿವರು ಹೇಳಿದರು.
ಪರಿಶೀಲನೆ ವೇಳೆ ದೇವಾಲಯದ ಭೂಮಿಯನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಹಲವಾರು ಪ್ರಕರಣಗಳಿವೆ.
ರಾಜ್ಯದ ಏಳು ಜಿಲ್ಲೆಗಳಲ್ಲಿ 169.86167 ಎಕರೆ ಒತ್ತುವರಿ ಭೂಮಿ ತೆರವುಗೊಳಿಸಲು ಜಗನ್ನಾಥ ದೇವಾಲಯ ಕಾಯ್ದೆಯಡಿಯಲ್ಲಿ ಒಟ್ಟು 974 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ದೇವಾಲಯದ ಆಸ್ತಿಯನ್ನು ಸುರಕ್ಷಿತವಾಗಿರಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಸಚಿವರು ವಿಧಾನಸಭೆಗೆ ಭರವಸೆ ನೀಡಿದರು.