ಕೋಲ್ಕತ್ತಾ: ಕೋಲ್ಕತ್ತಾದಲ್ಲಿ ನಡೆದ ಗೀತೆ ಪಠಣ ಕಾರ್ಯಕ್ರಮದಲ್ಲಿ ಇಬ್ಬರು ಕೋಳಿ ಮಾಂಸ ಮಾರಾಟಗಾರರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧಿತರಾಗಿದ್ದ ಮೂವರು ವ್ಯಕ್ತಿಗಳನ್ನು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಪಶ್ಚಿಮ ಬಂಗಾಳ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರನ್ನು ಸನ್ಮಾನಿಸಿದ್ದಾರೆ.
ಹಲ್ಲೆ ನಡೆಸಿದ ಆರೋಪಿಗಳಿಗೆ ಸನ್ಮಾನಿಸಿದ ತಮ್ಮ ನಡೆಯನ್ನು ಸಮರ್ಥಿಸಿಕೊಂಡ ಸುವೇಂದು ಅಧಿಕಾರಿ, "ಹಿಂದೂವಾಗಿ" ಅವರ ಬೆಂಬಲಕ್ಕೆ ನಿಂತಿದ್ದೇನೆ ಎಂದು ಹೇಳಿದ್ದಾರೆ.
ಡಿಸೆಂಬರ್ 7 ರಂದು ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆದ 'ಗೀತೆ ಪಾಠ' ಕಾರ್ಯಕ್ರಮದಲ್ಲಿ ಇಬ್ಬರು ಮಾಂಸ ಮಾರಾಟಗಾರರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬುಧವಾರ ರಾತ್ರಿ ಬಂಧಿಸಲ್ಪಟ್ಟ ಮೂವರು ವ್ಯಕ್ತಿಗಳಿಗೆ ಬ್ಯಾಂಕ್‌ಶಾಲ್ ನ್ಯಾಯಾಲಯವು ತಲಾ 1,000 ರೂ.ಗಳ ವೈಯಕ್ತಿಕ ಬಾಂಡ್ ಮೇಲೆ ಜಾಮೀನು ನೀಡಿದೆ.
ಇಂದು ಸನ್ಮಾನದ ಫೋಟೋವನ್ನು ಹಂಚಿಕೊಂಡಿರುವ ಅಧಿಕಾರಿ, ಫೇಸ್‌ಬುಕ್‌ನಲ್ಲಿ ಪೋಸ್ಟ್‌ನಲ್ಲಿ, "ನಿಮ್ಮ ನಿಷ್ಠಾವಂತ ಪೊಲೀಸರಿಂದ 'ಸನಾತನಿಗಳ'ನ್ನು ನಿಗ್ರಹಿಸಲು ಸಾಧ್ಯವಿಲ್ಲ ಎಂದು ನಾನು ಮಮತಾ ಬ್ಯಾನರ್ಜಿ(ಪಶ್ಚಿಮ ಬಂಗಾಳ ಸಿಎಂ) ಅವರಿಗೆ ಹೇಳಲು ಬಯಸುತ್ತೇನೆ" ಎಂದು ಹೇಳಿದ್ದಾರೆ.
"ಧರ್ಮವನ್ನು ರಕ್ಷಿಸುವ ಹೋರಾಟ ಮುಂದುವರಿಯುತ್ತದೆ ಮತ್ತು ಈ ಹೋರಾಟದಲ್ಲಿ, ಹಿಂದುತ್ವದ ಅಸಂಖ್ಯಾತ ಬೆಂಬಲಿಗರೊಂದಿಗೆ ನಾನು ಪ್ರತಿಯೊಬ್ಬ ಹಿಂದೂವಿನ ಜೊತೆ ನಿಲ್ಲುತ್ತೇನೆ" ಎಂದಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ಅಧಿಕಾರಿ, ಭಾರತದಲ್ಲಿ ನ್ಯಾಯದ ಧ್ವನಿ ಇನ್ನೂ ಮೇಲುಗೈ ಸಾಧಿಸುತ್ತಿದೆ ಎಂದು ಹೇಳಿದರು.
"ನಾನು ಶಾಸಕ, ವಿರೋಧ ಪಕ್ಷದ ನಾಯಕ, ಬಿಜೆಪಿ ಸದಸ್ಯ ಎಲ್ಲವೂ ನಂತರ ಬರುತ್ತದೆ. ಮೊದಲು ನಾನು ಹಿಂದೂ. ನನ್ನ ಹಿಂದೂ ಸಹೋದರ ಸಹೋದರಿಯರು ತೊಂದರೆಯಲ್ಲಿದ್ದರೆ, ನನ್ನ ಪ್ರಾಥಮಿಕ ಕರ್ತವ್ಯ ನನ್ನ 'ಧರ್ಮ'ವನ್ನು ರಕ್ಷಿಸುವುದು. ಗೀತೆ ನನಗೆ ಕಲಿಸಿದ್ದು ಅದನ್ನೇ" ಎಂದು ಅಧಿಕಾರಿ ಪ್ರತಿಪಾದಿಸಿದರು.