ಪಾಟ್ನ: ಇತ್ತೀಚಿನ ದಿನಗಳಲ್ಲಿ ಸದಾ ಒಂದಿಲ್ಲೊಂದು ಯಡವಟ್ಟುಗಳ ಮೂಲಕವೇ ಸುದ್ದಿಯಲ್ಲಿರುವ ಬಿಹಾರ ಸಿಎಂ ನಿತೀಶ್ ಕುಮಾರ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.
ಪಾಟ್ನಾದಲ್ಲಿ ನಡೆದ ನೇಮಕಾತಿ ಪತ್ರ ವಿತರಣೆ ಸಮಾರಂಭದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಯಡವಟ್ಟು ಮಾಡಿಕೊಂಡಿರುವುದು ಕೆಲವರಿಂದ ಟೀಕೆಗೆ ಗುರಿಯಾಗಿದೆ. ಮುಸ್ಲಿಂ ಮಹಿಳಾ ವೈದ್ಯೆಯೊಬ್ಬರ ಹಿಜಾಬ್ ನ್ನು ನಿತೀಶ್ ಕುಮಾರ್ ಎಳೆದಿದ್ದಾರೆ ಎಂದು ಹೇಳಲಾದ ವೀಡಿಯೊವೊಂದು ಟೀಕೆಗೆ ಗುರಿಯಾಗಿದೆ. ಕಾಂಗ್ರೆಸ್ ಪಕ್ಷ ಈ ಕೃತ್ಯವನ್ನು ಖಂಡಿಸಿದೆ. ಇದನ್ನು 'ನಾಚಿಕೆಯಿಲ್ಲದ' ಮತ್ತು 'ನೀಚ' ಕೃತ್ಯ ಎಂದು ಕಾಂಗ್ರೆಸ್ ಹೇಳಿದ್ದು ನಿತೀಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿದೆ. ವರದಿಗಳ ಪ್ರಕಾರ ನಿತೀಶ್ ಕುಮಾರ್ ನುಸ್ರತ್ ಪರ್ವೀನ್ ಎಂಬ ಮಹಿಳೆಯ ಹಿಜಾಬ್ ಎಳೆದಿದ್ದಾರೆ. ಈ ಅನಿರೀಕ್ಷಿತ ನಡೆಯಿಂದಾಗಿ ಮಹಿಳೆ ಕೆಲ ಕ್ಷಣ ಗೊಂದಲಕ್ಕೀಡಾದಂತೆ ಕಂಡುಬಂದಿದೆ.
ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಮುಸ್ಲಿಂ ವೈದ್ಯೆಯೊಬ್ಬರ ಹಿಜಾಬ್ ಅನ್ನು ಎಳೆದಿದ್ದಾರೆ ಎಂದು ಹೇಳಲಾದ ವೀಡಿಯೊದ ಕುರಿತು ಕಾಂಗ್ರೆಸ್ ಪಕ್ಷ ಸೋಮವಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
X ನಲ್ಲಿ ವೀಡಿಯೊವನ್ನು ಹಂಚಿಕೊಂಡ ಕಾಂಗ್ರೆಸ್, "ಇದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್. ಅವರ ನಾಚಿಕೆಯಿಲ್ಲದ ನಡೆಯನ್ನು ನೋಡಿ, ಒಬ್ಬ ಮಹಿಳಾ ವೈದ್ಯೆ ತನ್ನ ನೇಮಕಾತಿ ಪತ್ರವನ್ನು ಪಡೆಯಲು ಬಂದಿದ್ದರು ಮತ್ತು ನಿತೀಶ್ ಕುಮಾರ್ ತನ್ನ ಹಿಜಾಬ್ ನ್ನು ಎಳೆದಿದ್ದಾರೆ" ಎಂದು ಬರೆದಿದೆ.
ರಾಜ್ಯದಲ್ಲಿ ಮಹಿಳಾ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಕ್ಷ, "ಬಿಹಾರದಲ್ಲಿ ಅತ್ಯುನ್ನತ ಹುದ್ದೆಯನ್ನು ಹೊಂದಿರುವ ವ್ಯಕ್ತಿ ಬಹಿರಂಗವಾಗಿ ಇಂತಹ ನೀಚ ಕೃತ್ಯದಲ್ಲಿ ತೊಡಗಿದ್ದಾರೆ. ಯೋಚಿಸಿ, ರಾಜ್ಯದಲ್ಲಿ ಮಹಿಳೆಯರು ಎಷ್ಟು ಸುರಕ್ಷಿತವಾಗಿರುತ್ತಾರೆ?" ಎಂದು ಸೇರಿಸಿದೆ. "ಈ ಅಸಹ್ಯಕರ ವರ್ತನೆಗೆ ನಿತೀಶ್ ಕುಮಾರ್ ತಕ್ಷಣ ರಾಜೀನಾಮೆ ನೀಡಬೇಕು. ಈ ನೀಚತನ ಕ್ಷಮಿಸಲಾಗದು" ಎಂದು ಕಾಂಗ್ರೆಸ್ ಅವರ ರಾಜೀನಾಮೆಗೆ ಒತ್ತಾಯಿಸಿದೆ. ಕಾಂಗ್ರೆಸ್ ನ ಮಿತ್ರ ಪಕ್ಷ ಆರ್ ಜೆಡಿ ಸಹ ನಿತೀಶ್ ಕುಮಾರ್ ನಡೆಯನ್ನು ಟೀಕಿಸಿದೆ.
ವರದಿಗಳ ಪ್ರಕಾರ, ಮುಖ್ಯಮಂತ್ರಿ ನಿವಾಸದಲ್ಲಿ ನಡೆದ ನೇಮಕಾತಿ ಪತ್ರ ವಿತರಣಾ ಸಮಾರಂಭದಲ್ಲಿ ಈ ಘಟನೆ ನಡೆದಿದ್ದು, ಹೊಸದಾಗಿ ನೇಮಕಗೊಂಡ ಆಯುಷ್ ವೈದ್ಯರಿಗೆ ನೇಮಕಾತಿ ಪತ್ರಗಳನ್ನು ನೀಡಲಾಗುತ್ತಿತ್ತು. ನಿತೀಶ್ ಕುಮಾರ್ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದ ನಂತರ ಅವರ ಹೆಡ್ ಸ್ಕಾರ್ಫ್ ಬಗ್ಗೆ ಕೇಳುತ್ತಿರುವುದು ಮತ್ತು ಅದನ್ನು ತೆಗೆದುಹಾಕಲು ಸೂಚಿಸುತ್ತಿರುವುದು ದೃಶ್ಯಗಳಲ್ಲಿ ಕಂಡುಬರುತ್ತದೆ. ಅವರು ಪ್ರತಿಕ್ರಿಯಿಸುವ ಮೊದಲು, ಅವರೇ ತಮ್ಮ ಹಿಜಾಬ್ ನ್ನು ಎಳೆದಿದ್ದಾರೆ ಎಂದು ಆರೋಪಿಸಲಾಗಿದೆ.
685 ಆಯುರ್ವೇದ, 393 ಹೋಮಿಯೋಪತಿ ಮತ್ತು 205 ಯುನಾನಿ ವೈದ್ಯರು ಸೇರಿದಂತೆ ಒಟ್ಟು 1,283 ಆಯುಷ್ ವೈದ್ಯರಿಗೆ ಈ ಕಾರ್ಯಕ್ರಮದಲ್ಲಿ ನೇಮಕಾತಿ ಪತ್ರಗಳನ್ನು ನೀಡಲಾಗಿದೆ.