ನವದೆಹಲಿ: ಡಿಸೆಂಬರ್ 6 ರಂದು ಸಂಭವಿಸಿದ ಅಗ್ನಿ ಅವಘಡದಲ್ಲಿ 25 ಜನರನ್ನು ಬಲಿ ಪಡೆದ ಗೋವಾ ನೈಟ್‌ಕ್ಲಬ್‌ನ ಸಹ-ಮಾಲೀಕರಾದ ಗೌರವ್ ಲುತ್ರಾ ಮತ್ತು ಸೌರಭ್ ಲುತ್ರಾ ಅವರನ್ನು ಮಂಗಳವಾರ ಥೈಲ್ಯಾಂಡ್ ನಿಂದ ದೆಹಲಿಗೆ ಕರೆ ತರಲಾಗಿದೆ.
ಉತ್ತರ ಗೋವಾದ ಅರ್ಪೋರಾದಲ್ಲಿರುವ 'ಬಿರ್ಚ್ ಬೈ ರೋಮಿಯೋ ಲೇನ್' ನೈಟ್‌ಕ್ಲಬ್‌ನ ಸಹ-ಮಾಲೀಕರಾದ ಲುತ್ರಾ ಸಹೋದರರು, ಅಗ್ನಿ ಅವಘಡದ ನಂತರ ಥೈಲ್ಯಾಂಡ್‌ನ ಫುಕೆಟ್‌ಗೆ ಪರಾರಿಯಾಗಿದ್ದರು. ಅವರ ವಿರುದ್ಧ ಇಂಟರ್‌ಪೋಲ್ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಥಾಯ್ ಸರ್ಕಾರದೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಭಾರತೀಯ ರಾಯಭಾರ ಕಚೇರಿಯ ಮಧ್ಯ ಪ್ರವೇಶದ ನಂತರ ಡಿಸೆಂಬರ್ 11 ರಂದು ಫುಕೆಟ್‌ನಲ್ಲಿ ಥಾಯ್ ಅಧಿಕಾರಿಗಳು ಈ ಇಬ್ಬರನ್ನು ಬಂಧಿಸಿದ್ದರು.
ಪ್ರಕರಣದಲ್ಲಿ ಮುಂದಿನ ಕಾನೂನು ಕ್ರಮಗಳಿಗಾಗಿ ಅವರನ್ನು ಇಂದು ಗಡೀರಪಾರು ಮಾಡಲಾಗಿದ್ದು, ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.
ಇಂದು ಮಧ್ಯಾಹ್ನ ಗೌರವ್ ಲುತ್ರಾ ಮತ್ತು ಸೌರಭ್ ಲುತ್ರಾ ಅವರನ್ನು ಥೈಲ್ಯಾಂಡ್‌ನಿಂದ ದೆಹಲಿಗೆ ಕರೆತರಲಾಗಿದೆ.
ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಕ್ಷಣ ಅವರನ್ನು ಪೊಲೀಸರಿಗೆ ಹಸ್ತಾಂತರಿಸಲಾಯಿತು ಮತ್ತು ಹೆಚ್ಚಿನ ಕಾನೂನು ಕ್ರಮಗಳಿಗಾಗಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಈ ಇಬ್ಬರನ್ನು ದೆಹಲಿ ನ್ಯಾಯಾಲಯದ ಮುಂದೆ ಹಾಜರುಪಡಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಗೌರವ್ ಲುತ್ರಾ(44) ಮತ್ತು ಸೌರವ್ ಲುತ್ರಾ(40) ಸಹೋದರರ ವಿರುದ್ಧ ನರಹತ್ಯೆ ಮತ್ತು ನಿರ್ಲಕ್ಷ್ಯದ ಪ್ರಕರಣವನ್ನು ದಾಖಲಿಸಲಾಗಿದೆ. ನೈಟ್‌ಕ್ಲಬ್ ಕಡ್ಡಾಯ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿದ್ದು, ದುರಂತಕ್ಕೆ ಕಾರಣವಾಗಿದೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.