ನವದೆಹಲಿ: ನೆರೆಯ ದೇಶದಲ್ಲಿ 'ಹದಗೆಡುತ್ತಿರುವ ಭದ್ರತಾ ವಾತಾವರಣ' ಮತ್ತು ರಾಜಕೀಯ ನಾಯಕರೊಬ್ಬರು ಇತ್ತೀಚೆಗೆ ನೀಡಿದ 'ಭಾರತ ವಿರೋಧಿ' ಹೇಳಿಕೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವಿದೇಶಾಂಗ ಸಚಿವಾಲಯ ಬುಧವಾರ ಬಾಂಗ್ಲಾದೇಶದ ಹೈಕಮಿಷನರ್ ಎಂ ರಿಯಾಜ್ ಹಮೀದುಲ್ಲಾ ಅವರಿಗೆ ಸಮನ್ಸ್ ನೀಡಿದೆ.
'ಭಾರತದಲ್ಲಿರುವ ಬಾಂಗ್ಲಾದೇಶದ ಹೈಕಮಿಷನರ್ ರಿಯಾಜ್ ಹಮೀದುಲ್ಲಾ ಅವರಿಗೆ ಇಂದು ವಿದೇಶಾಂಗ ಸಚಿವಾಲಯ ಸಮನ್ಸ್ ಜಾರಿ ಮಾಡಿದ್ದು, ಬಾಂಗ್ಲಾದೇಶದಲ್ಲಿನ ಭದ್ರತಾ ವಾತಾವರಣ ಹದಗೆಡುತ್ತಿರುವ ಬಗ್ಗೆ ಭಾರತ ಬಲವಾದ ಕಳವಳ ವ್ಯಕ್ತಪಡಿಸಿದೆ' ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
'ಢಾಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಸುತ್ತ ಭದ್ರತಾ ಬೆದರಿಕೆಗಳನ್ನು ಸೃಷ್ಟಿಸುವ ಯೋಜನೆಯನ್ನು ಘೋಷಿಸಿರುವ ಕೆಲವು ಉಗ್ರಗಾಮಿ ಗುಂಪುಗಳ ಬಗ್ಗೆ ಹೈಕಮಿಷನರ್ ಗಮನ ಸೆಳೆಯಲಾಯಿತು' ಎಂದು ಅದು ಹೇಳಿದೆ.
ನ್ಯಾಷನಲ್ ಸಿಟಿಜನ್ ಪಾರ್ಟಿ (ಎನ್‌ಸಿಪಿ) ನಾಯಕ ಹಸ್ನತ್ ಅಬ್ದುಲ್ಲಾ ಅವರು ಇತ್ತೀಚೆಗೆ ಸಾರ್ವಜನಿಕ ಭಾಷಣದಲ್ಲಿ, ಬಾಂಗ್ಲಾದೇಶವು ದೆಹಲಿಗೆ ಪ್ರತಿಕೂಲವಾದ ಗುಂಪುಗಳಿಗೆ ಆಶ್ರಯ ನೀಡುತ್ತದೆ ಮತ್ತು ಈಶಾನ್ಯದ ಸೆವೆನ್ ಸಿಸ್ಟರ್ಸ್ (ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರಾ) ಅನ್ನು ಪ್ರತ್ಯೇಕಿಸಲು ಸಹಾಯ ಮಾಡುತ್ತದೆ ಎಂದು ಬೆದರಿಕೆಯೊಡ್ಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಕೆಲವು ಘಟನೆಗಳನ್ನು ಭಾರತಕ್ಕೆ ಜೋಡಿಸಿ, ಬಾಂಗ್ಲಾದೇಶದಲ್ಲಿ ಉಗ್ರಗಾಮಿಗಳು ಸೃಷ್ಟಿಸಿರುವ ಸುಳ್ಳು ನಿರೂಪಣೆಗಳನ್ನು ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿರಸ್ಕರಿಸಿದೆ.
'ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಕೆಲವು ಘಟನೆಗಳಿಗೆ ಸಂಬಂಧಿಸಿದಂತೆ ಉಗ್ರಗಾಮಿಗಳು ಸೃಷ್ಟಿಸಲು ಪ್ರಯತ್ನಿಸುತ್ತಿರುವ ಸುಳ್ಳು ನಿರೂಪಣೆಯನ್ನು ಭಾರತ ಸಂಪೂರ್ಣವಾಗಿ ಅಲ್ಲಗಳೆಯುತ್ತದೆ. ಮಧ್ಯಂತರ ಸರ್ಕಾರವು ಈ ಘಟನೆಗಳ ಕುರಿತು ಸಮಗ್ರ ತನಿಖೆ ನಡೆಸಿಲ್ಲ ಅಥವಾ ಭಾರತದೊಂದಿಗೆ ಅರ್ಥಪೂರ್ಣ ಪುರಾವೆಗಳನ್ನು ಹಂಚಿಕೊಂಡಿಲ್ಲ ಎಂಬುದು ದುರದೃಷ್ಟಕರ' ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಭಾರತದಲ್ಲಿ ಆಶ್ರಯ ಪಡೆದಿರುವ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ಭಾರತದ ನೆಲದಿಂದ 'ಪ್ರಚೋದನಕಾರಿ' ಹೇಳಿಕೆಗಳನ್ನು ನೀಡಲು ನಿರಂತರವಾಗಿ ಅವಕಾಶ ನೀಡಲಾಗುತ್ತಿದೆ ಎಂದು ಆರೋಪಿಸಿ ಭಾರತದ ಹೈಕಮಿಷನರ್ ಪ್ರಣಯ್ ವರ್ಮಾ ಅವರನ್ನು ಕರೆಸಿಕೊಂಡಿದ್ದ ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯ ಭಾನುವಾರ ತನ್ನ ಪ್ರತಿಭಟನೆಯನ್ನು ದಾಖಲಿಸಿತ್ತು.
ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಹೇಳಿಕೆಯೊಂದರಲ್ಲಿ, 'ಭಾರತದಲ್ಲಿ ಆಶ್ರಯ ಪಡೆದಿರುವ ಶೇಖ್ ಹಸೀನಾ ಅವರು ಬಾಂಗ್ಲಾದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವಂತೆ ತನ್ನ ಬೆಂಬಲಿಗರಿಗೆ ಕರೆ ನೀಡುತ್ತಿದ್ದಾರೆ ಮತ್ತು ಮುಂಬರುವ ಸಂಸತ್ ಚುನಾವಣೆಗಳಿಗೆ ಅಡ್ಡಿಪಡಿಸುವ ಉದ್ದೇಶದಿಂದ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ' ಎಂದು ಆರೋಪಿಸಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ್ದ ಭಾರತ, ಬಾಂಗ್ಲಾದೇಶದ ಹಿತಾಸಕ್ತಿಗಳಿಗೆ ವಿರುದ್ಧವಾದ ಚಟುವಟಿಕೆಗಳಿಗೆ ತನ್ನ ನೆಲವನ್ನು ಬಳಸಿಕೊಳ್ಳುವುದಕ್ಕೆ ಎಂದಿಗೂ ಅವಕಾಶ ನೀಡಿಲ್ಲ. ಮುಂಬರುವ ಸಾರ್ವತ್ರಿಕ ಚುನಾವಣೆಗಳನ್ನು ಬಾಂಗ್ಲಾದೇಶ ಶಾಂತಿಯುತವಾಗಿ ನಡೆಸಲಿ' ಎಂದು ಭಾನುವಾರ ವಿದೇಶಾಂಗ ಸಚಿವಾಲಯದ ಹೇಳಿತ್ತು.