ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಮುಗಿದ ನಂತರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಆಯೋಜಿಸಿದ್ದ ಸಾಂಪ್ರದಾಯಿಕ ಚಹಾ ಕೂಟದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ವಿಪಕ್ಷ ನಾಯಕರು ಭಾಗವಹಿಸಿದ್ದರು. ಈ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಸ್ನೇಹಪರ ಮಾತುಕತೆ ನಡೆಸಿದ್ದಾರೆ.
ಪ್ರಿಯಾಂಕಾ ಅವರ ಕ್ಷೇತ್ರ ಕೇರಳದ 'ವಯನಾಡ್ ನ ಹಳದಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಇತ್ತೀಚಿನ ಇಥಿಯೋಪಿಯಾ ಭೇಟಿಯ ಬಗ್ಗೆ ಕೂಡ ಆತ್ಮೀಯ ಮಾತುಕತೆ ನಡೆಸಿದರು. ತಾವು ಕೇರಳದ ಲೋಕಸಭಾ ಕ್ಷೇತ್ರದ ಪ್ರತಿನಿಧಿಯಾಗಿರುವುದರಿಂದ ಕ್ಷೇತ್ರದ ಮತದಾರರೊಂದಿಗೆ ಉತ್ತಮ ಸಂಪರ್ಕ ಸಾಧಿಸಲು ಮಲಯಾಳಂ ಭಾಷೆ ಕಲಿಯುತ್ತಿರುವುದಾಗಿ ಹೇಳಿದ್ದಾರೆ.
ಆಫ್ರಿಕಾ ಮತ್ತು ಮಧ್ಯಪ್ರಾಚ್ಯಕ್ಕೆ ಪ್ರಧಾನಿಯವರ ಇತ್ತೀಚಿನ ಮೂರು ರಾಷ್ಟ್ರಗಳ ಪ್ರವಾಸದ ಬಗ್ಗೆಯೂ ಅವರು ಪ್ರಧಾನಿಯನ್ನು ಕೇಳಿದರು. ಇಥಿಯೋಪಿಯಾದ ಬಗ್ಗೆ ಭಾರತದಲ್ಲಿ ಅನೇಕ ಜನರು ಹೊಂದಿರುವ ಅನಿಸಿಕೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಉತ್ತಮವಾಗಿ ಮುಂದುವರಿಯುತ್ತಿರುವ ಆ ದೇಶದ ನಿಜವಾದ ಸ್ಥಿತಿಗಿಂತ ಸಾಕಷ್ಟು ಭಿನ್ನವಾಗಿದೆ ಎಂದು ಮೋದಿ ಹೇಳಿದರು.
ಟೀ ಪಾರ್ಟಿ ಎನ್ನುವುದು ಪ್ರತಿ ಅಧಿವೇಶನದ ನಂತರ ಸ್ಪೀಕರ್ ವಿವಿಧ ಪಕ್ಷಗಳ ನಾಯಕರೊಂದಿಗೆ ಆಯೋಜಿಸುವ ಸಾಂಪ್ರದಾಯಿಕ ಕೂಟವಾಗಿದೆ. 2024 ರ ಮಳೆಗಾಲದ ಅಧಿವೇಶನದ ನಂತರ ವಿರೋಧ ಪಕ್ಷಗಳು ಈ ಚಹಾ ಕೂಟದಿಂದ ದೂರ ಉಳಿದಿದ್ದವು.
ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ನಿರ್ಧಾರದ ಮೇರೆಗೆ ಈ ಬಾರಿ ಪಕ್ಷವು ಇದಕ್ಕೆ ಹಾಜರಾಗಲು ನಿರ್ಧರಿಸಿತು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ವಿರೋಧ ಪಕ್ಷಗಳು ಮಸೂದೆಗಳನ್ನು ವಿರೋಧಿಸುತ್ತಲೇ ಇದ್ದರೂ, ಈ ಅಧಿವೇಶನದಲ್ಲಿ ಲೋಕಸಭಾಧ್ಯಕ್ಷರು ನ್ಯಾಯಯುತವಾಗಿ ವರ್ತಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕರಿಗೆ ಸ್ವಲ್ಪ ಸಮಾಧಾನವಾಗಿದೆ. ಇದು ಹಿಂದಿನ ಅಧಿವೇಶನಕ್ಕಿಂತ ಭಿನ್ನವಾಗಿದೆ ಎಂದು ಹೇಳಿದ್ದು, ಆದರೆ ತಮಗೆ ಹೆಚ್ಚು ಮಾತನಾಡಲು ಅವಕಾಶ ಸಿಗಲಿಲ್ಲ ಎಂಬ ಆರೋಪವಿದೆ.
ಎಸ್‌ಪಿ ನಾಯಕ ಧರ್ಮೇಂದ್ರ ಯಾದವ್ ಚಳಿಗಾಲದ ಅಧಿವೇಶನವು ಅತ್ಯಂತ ಕಡಿಮೆ ಅವಧಿಯದ್ದಾಗಿತ್ತು. ಹೆಚ್ಚು ಸಮಯ ಇಲ್ಲದ್ದ ಕಾರಣ ಪ್ರಧಾನಿಯವರಿಗೆ ಒಳ್ಳೆಯದಾಯಿತು ಎಂದರು.
ಆರ್‌ಎಸ್‌ಪಿಯ ಎನ್ ಕೆ ಪ್ರೇಮಚಂದ್ರನ್ ಕೂಡ ಅಲ್ಪಾವಧಿಯ ಅಧಿವೇಶನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಆದರೆ ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು, ಅವರಿಗೆ ಮಾತನಾಡಲು ಸಾಕಷ್ಟು ಅವಕಾಶಗಳನ್ನು ನೀಡಿದ್ದಾರೆ ಎಂದರು. ಪ್ರಿಯಾಂಕಾ ಗಾಂಧಿ ಅವರಂತೆ ಅನೇಕ ಸಂಸದರು ಸದನದಲ್ಲಿ ಪ್ರೇಮಚಂದ್ರನ್ ಅವರ ನಡವಳಿಕೆಯನ್ನು ಯಾವಾಗಲೂ ಗಮನಿಸುತ್ತಾ ಸಂಸತ್ತಿನ ಕಲಾಪಗಳ ವಿವಿಧ ಅಂಶಗಳನ್ನು ಕಲಿಯಲು ಪ್ರಯತ್ನಿಸುತ್ತಾರೆ ಎಂದು ಹೇಳಿದರು ಎಂದು ಮೂಲಗಳು ತಿಳಿಸಿವೆ.
ಟೀ ಪಾರ್ಟಿಯಲ್ಲಿ ವಿರೋಧ ಪಕ್ಷಗಳಿಂದ ಮಾಣಿಕ್ಕಂ ಟ್ಯಾಗೋರ್, ಕುಮಾರಿ ಸೆಲ್ಜಾ, ಸುಪ್ರಿಯಾ ಸುಳೆ, ಎ ರಾಜಾ, ರಾಮ್ ಮೋಹನ್ ನಾಯ್ಡು, ರಾಜೀವ್ ರಂಜನ್ ಸಿಂಗ್ ಮತ್ತು ಚಿರಾಗ್ ಪಾಸ್ವಾನ್ ಪಾಲ್ಗೊಂಡಿದ್ದರು.