ಭದೋಹಿ: ಪತ್ನಿಯೊಂದಿಗೆ ಜಗಳವಾಡಿದ ನಂತರ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ತನ್ನ ನಾಲ್ಕು ವರ್ಷದ ಮಗನನ್ನು ಪದೇ ಪದೇ ನೆಲಕ್ಕೆ ಬಡಿದು ಕೊಲೆ ಮಾಡಿದ ಅಮಾನವೀಯ ಘಟನೆ ನಡೆದಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಭದೋಹಿಯ ಸೂರಿಯಾವಾನ್ ಪ್ರದೇಶದ ಗುವಾಲಿ ಗ್ರಾಮದಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ.
ಆರೋಪಿಯನ್ನು ರಾಮ್ಜಿ ವನವಾಸಿ ಎಂದು ಗುರುತಿಸಲಾಗಿದ್ದು, ಶನಿವಾರ ಮಧ್ಯರಾತ್ರಿ ಮನೆಗೆ ಮರಳಿದಾಗ ಕುಡಿದ ಮತ್ತಿನಲ್ಲಿ ಮಗನನ್ನೇ ಕೊಲೆ ಮಾಡಿದ್ದಾನೆ ಎಂದು ಠಾಣಾಧಿಕಾರಿ ಮೊಹಮ್ಮದ್ ಶಕೀಲ್ ಖಾನ್ ಅವರು ತಿಳಿಸಿದ್ದಾರೆ.
ಪತ್ನಿಯೊಂದಿಗೆ ಜಗಳವಾಡಿದ್ದ ಆರೋಪಿ, ನಂತರ ಪತ್ನಿ ಮೇಲಿನ ಕೊಪಕ್ಕೆ ಮಲಗಿದ್ದ ತನ್ನ 4 ವರ್ಷದ ಮಗ ವಿಕಾಸ್‌ನನ್ನು ಎತ್ತಿಕೊಂಡು ಹಲವು ಬಾರಿ ನೆಲಕ್ಕೆ ಬಡಿದು ಸ್ಥಳದಿಂದ ಪರಾರಿಯಾಗಿದ್ದ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಕುಟುಂಬ ಸದಸ್ಯರು ಗಾಯಗೊಂಡಿದ್ದ ಮಗುವಿಗೆ ಪ್ರಥಮ ಚಿಕಿತ್ಸೆ ನೀಡಲು ಪ್ರಯತ್ನಿಸಿದರು. ಆದರೆ ಗಂಭೀರ ಗಾಯಗಳಿದ್ದ ಸಾವನ್ನಪ್ಪಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಭಾನುವಾರ ಮಧ್ಯಾಹ್ನ, ಮಗುವಿನ ಅಜ್ಜಿ ಪ್ರಭಾವತಿ ದೇವಿ ದೂರು ದಾಖಲಿಸಿದ್ದು, ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಖಾನ್ ಹೇಳಿದ್ದಾರೆ.