ಕೋಲ್ಕತ್ತಾ: ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮನೆಯೊಳಗೆ ಮಲಗಿದ್ದ ಒಂದೇ ಕುಟುಂಬದ ನಾಲ್ವರು ಸುಟ್ಟು ಕರಕಲಾದ ದಾರುಣ ಘಟನೆ ನಡೆದಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಹೌರಾದ ಜಾಯ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸೌರಿಯಾ ಗ್ರಾಮದಲ್ಲಿ ನಿನ್ನೆ ಮಧ್ಯರಾತ್ರಿ ಮನೆಯೊಂದು ಸುಟ್ಟು ಕರಕಲಾಗಿದೆ
ಮೃತರನ್ನು ದುರ್ಜೋಧನ್ ದೋಲುಯಿ(72), ಅವರ ಮಗ ದುಧ್‌ಕುಮಾರ್ ದೋಲುಯಿ(45), ಸೊಸೆ ಶಿಬಾನಿ ದೋಲುಯಿ(40) ಮತ್ತು ಮೊಮ್ಮಗಳು ಶಂಪಾ ದೋಲುಯಿ(15) ಎಂದು ಗುರುತಿಸಲಾಗಿದೆ.
ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ನಂತರ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ನಾಲ್ವರ ಶವಗಳನ್ನು ಮನೆಯಿಂದ ಹೊರತೆಗೆದಿದ್ದಾರೆ.
ಅವರ ಹುಲ್ಲಿನ ಮನೆಗೆ ಹೇಗೆ ಬೆಂಕಿ ಹೊತ್ತಿಕೊಂಡಿತು ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ಅಗ್ನಿಶಾಮಕ ದಳದ ವಾಹನಗಳನ್ನು ಸ್ಥಳಕ್ಕೆ ಆಗಮಿಸಿದ್ದು, ಸುಮಾರು ಒಂದು ಗಂಟೆಯ ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ.
"ಮರಣೋತ್ತರ ಪರೀಕ್ಷೆಗಾಗಿ ಉಲುಬೇರಿಯಾದ ಸರ್ಕಾರಿ ಆಸ್ಪತ್ರೆಗೆ ಮೃತದೇಹಗಳನ್ನು ಕಳುಹಿಸಲಾಗಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಟುಂಬವು ತುಂಬಾ ಬಡವರೆಂದು ಸ್ಥಳೀಯರು ತಿಳಿಸಿದ್ದಾರೆ. ದುಧ್‌ಕುಮಾರ್‌ಗೆ ರಾಜ್ಯದ ಹೊರಗೆ ವಲಸೆ ಕಾರ್ಮಿಕನಾಗಿ ಕೆಲಸ ಮಾಡುವ ಒಬ್ಬ ಮಗನೂ ಇದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.