ಶಹಜಹಾನ್‌ಪುರ: ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯಲ್ಲಿ ಬುಧವಾರ ಸಂಜೆ ಪ್ರಯಾಣಿಕ ರೈಲೊಂದು ಹಳಿ ದಾಟುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಮತ್ತು ಅವರ ಇಬ್ಬರು ಮಕ್ಕಳು ಸೇರಿದಂತೆ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಐವರೂ ಒಂದೇ ಮೋಟಾರ್ ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ.
ರೌಜಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ರೌಜಾ ರೈಲ್ವೆ ನಿಲ್ದಾಣದ ಬಳಿ, ಪಾದಚಾರಿ ಮಾರ್ಗದ ಮೂಲಕ ಬೈಕ್ ರೈಲು ಮಾರ್ಗವನ್ನು ದಾಟುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ದ್ವಿವೇದಿ ತಿಳಿಸಿದ್ದಾರೆ.
"ಇಂದು ಸಂಜೆ 6.30 ರ ಸುಮಾರಿಗೆ, ಲಖನೌ ದಿಕ್ಕಿನಿಂದ ಬರುತ್ತಿದ್ದ ಪ್ಯಾಸೆಂಜರ್ ರೈಲು, ಹಳಿ ದಾಟುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದರು" ಎಂದು ದ್ವಿವೇದಿ ಹೇಳಿದ್ದಾರೆ.
ಮೃತರನ್ನು ಲಖಿಂಪುರ ಜಿಲ್ಲೆಯ ವಂಕಾ ಗ್ರಾಮದ ನಿವಾಸಿ ಸೇಠ್‌ಪಾಲ್(40), ಅವರ ಪತ್ನಿ ಪೂಜಾ(38), ಅವರ ನಾಲ್ಕು ರಿಂದ ಆರು ವರ್ಷದೊಳಗಿನ ಇಬ್ಬರು ಮಕ್ಕಳು ಮತ್ತು ಸೇಠ್‌ಪಾಲ್ ಅವರ ಸೋದರ ಮಾವ ಹರಿ ಓಂ(45) ಎಂದು ಗುರುತಿಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.