ವಿಜಯವಾಡ: ಡಿಸೆಂಬರ್ 21 ರಂದು ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಜನ್ಮದಿನದ ಆಚರಣೆಯ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಗೆ ಕಾಲಿನಿಂದ ಒದ್ದು, ಅಮಾನುಷವಾಗಿ ಹಲ್ಲೆ ನಡೆಸಿದ ವ್ಯಕ್ತಿಯನ್ನು ಪೊಲೀಸರು ನಡು ಬೀದಿಯಲ್ಲಿ ಪರೇಡ್ ಮಾಡಿಸಿದ್ದಾರೆ.
ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಕಾರ್ಯಕರ್ತ ಎಂದು ಹೇಳಲಾದ ಪ್ರಮುಖ ಆರೋಪಿ ಅಜಯ್ ದೇವನನ್ನು ಸತ್ಯಸಾಯಿ ಜಿಲ್ಲೆಯ ಕದಿರಿಯ RTC ಬಸ್ ನಿಲ್ದಾಣ ವೃತ್ತದಿಂದ ಗ್ರಾಮಾಂತರ ಪೊಲೀಸ್ ಠಾಣೆಯವರೆಗೆ ಪರೇಡ್ ಮಾಡಿಸಿದ್ದಾರೆ.
ಇದರ ವಿಡಿಯೋ ವೈರಲ್ ಆಗಿದ್ದು, ಹಲವಾರು ಪೊಲೀಸರು ಅಜಯ್ ದೇವನನ್ನು ಬರಿಗಾಲಿನಲ್ಲಿ ನಡೆಸಿಕೊಂಡು ಹೋಗುತ್ತಿರುವುದು ಕಂಡುಬಂದಿದೆ.ಈ ವಿಡಿಯೋ ಮತ್ತು ಪೋಟೋಗಳನ್ನು ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಸುರಕ್ಷತೆಯ ಕಾರಣದಿಂದ ಜನಸಂದಣಿಯಿಂದ ದೂರ ಪಟಾಕಿ ಸಿಡಿಸುವಂತೆ ಸಂತ್ರಸ್ತೆ ಸಂಧ್ಯಾ ರಾಣಿ ಆರೋಪಿಗಳಿಗೆ ಹೇಳಿದ ನಂತರ ಹಲ್ಲೆ ನಡೆಸಲಾಗಿತ್ತು ಎಂದು ಹೇಳಲಾಗಿದೆ.
ಆಕೆಯ ಮನವಿಯಿಂದ ಕೋಪಗೊಂಡ ಅಜಯ್ ದೇವ, ಮತ್ತೊಬ್ಬ ವೈಎಸ್‌ಆರ್‌ಸಿಪಿ ಕಾರ್ಯಕರ್ತ ಅಂಜಿನಪ್ಪನೊಂದಿಗೆ ಸೇರಿ ಆಕೆಯ ಹೊಟ್ಟೆಯಲ್ಲಿದ್ದ ಮಗುವಿಗೆ ತೊಂದರೆ ಕೊಡುವ ಉದ್ದೇಶದಿಂದ ಕತ್ತು ಹಿಸುಕಿ ಹೊಟ್ಟೆಗೆ ಒದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಅಜಯ್ ದೇವನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸದ್ಯ ಪರಾರಿಯಾಗಿರುವ ಎರಡನೇ ಆರೋಪಿ ಆಂಜಿನಪ್ಪನನ್ನು ಪತ್ತೆ ಹಚ್ಚಿ ಬಂಧಿಸುವ ಪ್ರಯತ್ನ ನಡೆಯುತ್ತಿದೆ.
ಸ್ಪಷ್ಟ ಕ್ರಿಮಿನಲ್ ಉದ್ದೇಶದಿಂದ ಹಲ್ಲೆ ನಡೆಸಲಾಗಿದ್ದು, ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಕದಿರಿ ಪೊಲೀಸ್ ಉಪಾಧೀಕ್ಷಕ (ಡಿಎಸ್ಪಿ) ಶಿವ ನಾರಾಯಣಸ್ವಾಮಿ ತಿಳಿಸಿದ್ದಾರೆ.