ದೆಹಲಿ ಮೂಲದ ಯುವತಿ ಗಾಳಿಯ ಗುಣಮಟ್ಟ ಮತ್ತು ಸುರಕ್ಷತೆಯನ್ನು ಉಲ್ಲೇಖಿಸಿ, ಬೆಂಗಳೂರು ನಗರವು ದೆಹಲಿಗಿಂತ ಸಾಕಷ್ಟು ಉತ್ತಮವಾಗಿದೆ, ಬೆಂಗಳೂರನ್ನು ರಾಷ್ಟ್ರ ರಾಜಧಾನಿ ಎಂದು ಘೋಷಿಸಿ ಎಂದು ಹೇಳುತ್ತಾ ವಿಡಿಯೊ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದು ಭಾರೀ ವೈರಲ್ ಆಗಿದೆ.
ದೆಹಲಿ ಮೂಲದ ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಯುವತಿಯೊಬ್ಬರು, ಶುದ್ಧ ಗಾಳಿ, ಸುರಕ್ಷಿತ ಬೀದಿಗಳು ಮತ್ತು ನಗರಕ್ಕೆ ಬರುವವರಿಗೆ ಉತ್ತಮ ತಾವರಣವನ್ನು ಉಲ್ಲೇಖಿಸಿ, ದೆಹಲಿಯ ಬದಲು ಬೆಂಗಳೂರು ನಗರವನ್ನು ಭಾರತದ ರಾಷ್ಟ್ರೀಯ ರಾಜಧಾನಿಯಾಗಿ ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ.
ಅವರ ಅಭಿಪ್ರಾಯಗಳ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ದೆಹಲಿ ಮೂಲದ ಹುಡುಗಿಯಾಗಿ, ನಾನು ಇದನ್ನೇ ಹೇಳಲೇಬೇಕು ಎಂದು ವಿಡಿಯೊಗೆ ಶೀರ್ಷಿಕೆ ಕೊಟ್ಟಿದ್ದಾರೆ. ಈಕೆಯ ಹೆಸರು ಸಿಮ್ರಿಧಿ ಮಖಿಜಾ, ದೆಹಲಿ ಮೂಲದ ಇತ್ತೀಚೆಗೆ ಬೆಂಗಳೂರಿಗೆ ಉದ್ಯೋಗ ನಿಮಿತ್ತ ಸ್ಥಳಾಂತರಗೊಂಡಿದ್ದರು.
ಬೆಂಗಳೂರಿನಲ್ಲಿ 70 ದಿನಗಳಿಗೂ ಹೆಚ್ಚು ಕಾಲ ಕಳೆದಿದ್ದೇನೆ, ಇತ್ತೀಚೆಗೆ ದೆಹಲಿಯಲ್ಲಿರುವ ನನ್ನ ಹೆತ್ತವರನ್ನು ಭೇಟಿ ಮಾಡಲೆಂದು ದೆಹಲಿಗೆ ಹೋಗಿ 15 ದಿನ ಇದ್ದು ಬಂದೆ. ದೆಹಲಿಯಲ್ಲಿರುವುದು ಗ್ಯಾಸ್ ಚೇಂಬರ್‌ನಲ್ಲಿರುವಂತೆ ಭಾಸವಾಯಿತು. ಅದು ಇನ್ನೂ ರಾಷ್ಟ್ರೀಯ ರಾಜಧಾನಿ ಏಕೆ ಉಳಿದುಕೊಂಡಿದೆ ಎಂದು ನನಗೆ ತಿಳಿದಿಲ್ಲ ಎಂದಿದ್ದಾರೆ.
ಬೆಂಗಳೂರು ಏಕೆ ಉತ್ತಮವಾಗಿದೆ?
ಮಖಿಜಾ ಬೆಂಗಳೂರನ್ನು ಏಕೆ ರಾಷ್ಟ್ರ ರಾಜಧಾನಿ ಎಂದು ಘೋಷಿಸಬೇಕು ಎಂದು ವ್ಯಾಖ್ಯಾನ ಕೊಟ್ಟಿದ್ದಾರೆ. ನಾನು ಸುಲಭವಾಗಿ ಉಸಿರಾಡಬಲ್ಲ, ತಡರಾತ್ರಿ ಹೊರಗೆ ಹೋಗಬಹುದಾದ ನಗರ ಎಂದು ಬಣ್ಣಿಸಿದ್ದಾರೆ. ರಾತ್ರಿ 10 ಗಂಟೆ, ನಾನು ಒಬ್ಬ ಸ್ನೇಹಿತರನ್ನು ಭೇಟಿಯಾಗಿ ಸುರಕ್ಷಿತವಾಗಿ ಮನೆಗೆ ಬಂದು ತಲುಪಿದ್ದೇನೆ. ಇಲ್ಲಿ ರಸ್ತೆಗಳು ಸುರಕ್ಷಿತವಾಗಿವೆ, ಮಹಿಳೆಯರ ಸುರಕ್ಷತೆ ದೊಡ್ಡ ಸಮಸ್ಯೆಯಾಗಿಲ್ಲ.
ಮಾಲಿನ್ಯ, ಅಸುರಕ್ಷಿತ ರಸ್ತೆಗಳು ಮತ್ತು ನಡೆಯಲು ಕಷ್ಟಕರವಾದ ಸ್ಥಳಗಳಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ದೆಹಲಿಯೊಂದಿಗೆ ಬೆಂಗಳೂರನ್ನು ಹೋಲಿಸಿ ಮಾತನಾಡಿದ್ದಾರೆ.
ನಮ್ಮ ದೇಶಕ್ಕೆ ಭೇಟಿ ನೀಡುವ ಯಾವುದೇ ವಿದೇಶಿ ಅತಿಥಿಯನ್ನು ಕೆಟ್ಟ ಗಾಳಿ, ಕೆಟ್ಟ ರಸ್ತೆಗಳು ಮತ್ತು ನಡೆಯಲು ಕಷ್ಟಕರವಾದ ಸ್ಥಳಗಳಿಗೆ ಏಕೆ ಒಳಪಡಿಸಬೇಕು, ಬೆಂಗಳೂರಿನಂತಹ ಉತ್ತಮ ನಗರದಲ್ಲಿ ಅವರನ್ನು ಸ್ವಾಗತಿಸಬೇಕು ಎಂದು ಹೇಳಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ
ಅವರ ಪೋಸ್ಟ್ ಆನ್‌ಲೈನ್‌ನಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಬೆಂಗಳೂರಿನ ಶುದ್ಧ ಗಾಳಿ ಮತ್ತು ಸುರಕ್ಷಿತ ಬೀದಿಗಳನ್ನು ಎತ್ತಿ ತೋರಿಸಿದ್ದಕ್ಕಾಗಿ ಅನೇಕ ಬಳಕೆದಾರರು ಅವರನ್ನು ಹೊಗಳಿದರು. ಇತರರು ವಿರುದ್ಧ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಬುದ್ಧಿವಂತ ವಿಷಯ ಸೃಷ್ಟಿಕರ್ತರಾಗಿ, ಇನ್ನೊಂದು ನಗರವನ್ನು ರಾಜಧಾನಿಯನ್ನಾಗಿ ಮಾಡುವ ಕಲ್ಪನೆಯನ್ನು ತೇಲಿಸುವ ಬದಲು, ದೆಹಲಿಯನ್ನು ಉತ್ತಮ ಸ್ಥಳವನ್ನಾಗಿ ಮಾಡಲು ನೀವು ನಿಮ್ಮ ಧ್ವನಿಯನ್ನು ಏಕೆ ಎತ್ತಬಾರದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಒಂದು ಸಣ್ಣ ತಿದ್ದುಪಡಿ! ರಸ್ತೆಗಳು ವಾಸ್ತವವಾಗಿ ಸುರಕ್ಷಿತವಾಗಿಲ್ಲ. ಬೆಂಗಳೂರಿನ ರಸ್ತೆಗಳು ಮಾರಕ ಗುಂಡಿಗಳನ್ನು ಹೊಂದಿವೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಹಳೆಯ ನಗರವನ್ನು ಹಾಳು ಮಾಡಿದ ನಂತರ ಹೊಸ ನಗರಕ್ಕೆ ಬದಲಾಯಿಸುವ ಪ್ರವೃತ್ತಿ ಹೇಗೆ ಇದೆ ನೋಡಿ? ದೆಹಲಿ ಯಾವಾಗಲೂ ಇಷ್ಟೊಂದು ವಿಷಕಾರಿಯಾಗಿತ್ತು ಎಂದು ನೀವು ಭಾವಿಸುತ್ತೀರಾ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇತ್ತೀಚೆಗೆ, ಮಖಿಜಾ ಅವರ ಮತ್ತೊಂದು ವೀಡಿಯೊ ಕೂಡ ವೈರಲ್ ಆಗಿದ್ದು, ನಗರದ ಪರಿಸ್ಥಿತಿಯಿಂದಾಗಿ ತನ್ನ ಹೆತ್ತವರನ್ನು ದೆಹಲಿಯಿಂದ ಹೊರಗೆ ಸ್ಥಳಾಂತರಿಸಲು ಬಯಸುತ್ತಿರುವ ಬಗ್ಗೆ ಅವರು ಭಾವನಾತ್ಮಕವಾಗಿ ಮಾತನಾಡಿದ್ದರು.
ವಿಡಿಯೋದಲ್ಲಿ, ಹೆತ್ತವರನ್ನು ಬೇರೆಡೆಗೆ ಸ್ಥಳಾಂತರಿಸಲು ಸಾಲ ಮಾಡಲು ಮತ್ತು ತನ್ನ ಆರ್ಥಿಕ ಆರೋಗ್ಯವನ್ನು ಹಾಳುಮಾಡಲು ಕೂಡ ಸಿದ್ಧ ಎಂದು ಹೇಳಿಕೊಂಡಿದ್ದರು.