"ಹೆಚ್ಚಿದ ಭಯೋತ್ಪಾದಕ ಚಟುವಟಿಕೆ"ಯಿಂದಾಗಿ 2026 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ "ಸಶಸ್ತ್ರ ಸಂಘರ್ಷ" ಉಂಟಾಗುವ ಸಾಧ್ಯತೆಯಿದೆ ಎಂದು ಅಮೆರಿಕದ ಚಿಂತಕರ ಚಾವಡಿಯ ವರದಿ ತಿಳಿಸಿದೆ. ವಿದೇಶಾಂಗ ಸಂಬಂಧಗಳ ಮಂಡಳಿಯ ವರದಿಯ ಪ್ರಕಾರ ಟ್ರಂಪ್ ಆಡಳಿತ ನವದೆಹಲಿ ಮತ್ತು ಇಸ್ಲಾಮಾಬಾದ್ ನಡುವಿನ ಸಂಘರ್ಷವನ್ನು "ಅಂತ್ಯಗೊಳಿಸಲು ಪ್ರಯತ್ನಿಸಿದೆ" ಎಂದು ಹೇಳಿದೆ.
" ಟ್ರಂಪ್ ಅಧ್ಯಕ್ಷತೆಯ ಎರಡನೇ ಅವಧಿಯಲ್ಲಿ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಗಾಜಾ ಪಟ್ಟಿ ಮತ್ತು ಉಕ್ರೇನ್‌ನಲ್ಲಿ ಹಾಗೂ ಭಾರತ ಮತ್ತು ಪಾಕಿಸ್ತಾನ ಮತ್ತು ಕಾಂಬೋಡಿಯಾ ಮತ್ತು ಥೈಲ್ಯಾಂಡ್ ನಡುವಿನಂತಹ ಅನೇಕ ನಡೆಯುತ್ತಿರುವ ಸಂಘರ್ಷಗಳನ್ನು ಕೊನೆಗೊಳಿಸಲು ಪ್ರಯತ್ನಿಸಿದೆ" ಎಂದು ವರದಿ ಹೇಳಿದೆ.
ಈ ವರ್ಷದ ಮೇ ತಿಂಗಳಲ್ಲಿ ಎರಡು ದಕ್ಷಿಣ ಏಷ್ಯಾದ ದೇಶಗಳು ಸಣ್ಣ ಮಿಲಿಟರಿ ಮುಖಾಮುಖಿಯಲ್ಲಿ ಭಾಗಿಯಾಗಿದ್ದವು. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ನಾಗರಿಕರ ಸಾವಿಗೆ ಕಾರಣವಾದ ಮಾರಕ ಭಯೋತ್ಪಾದಕ ದಾಳಿಯ ಒಂದು ತಿಂಗಳ ನಂತರ ಮೂರು ದಿನಗಳ ಸಂಘರ್ಷ ಸಂಭವಿಸಿತ್ತು.
ಮೇ 6ರ ರಾತ್ರಿ, ಭಾರತೀಯ ಸೇನೆ ಪಾಕಿಸ್ತಾನದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂದೂರ್ ನ್ನು ಪ್ರಾರಂಭಿಸಿತು. ಕಾರ್ಯಾಚರಣೆಯಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರು ಮತ್ತು ಒಂಬತ್ತು ಶಿಬಿರಗಳನ್ನು ನಿರ್ಮೂಲನೆ ಮಾಡಲಾಯಿತು.
ಮೇ 7 ಮತ್ತು 10 ರ ನಡುವೆ, ಪಾಕಿಸ್ತಾನ ಸಶಸ್ತ್ರ ಡ್ರೋನ್‌ಗಳನ್ನು ಬಳಸಿಕೊಂಡು ಮಿಲಿಟರಿ ಮತ್ತು ನಾಗರಿಕ ಆಸ್ತಿಗಳನ್ನು ಗುರಿಯಾಗಿಸಲು ಪ್ರಯತ್ನಿಸಿತು. ಈ ಪ್ರತಿಯೊಂದು ಅತಿಕ್ರಮಣವನ್ನು ಭಾರತೀಯ ಸೇನೆಯು ಯಶಸ್ವಿಯಾಗಿ ತಟಸ್ಥಗೊಳಿಸಿತು. ಯಾವುದೇ ಸಾವುನೋವು ಅಥವಾ ಹಾನಿ ವರದಿಯಾಗಿರಲಿಲ್ಲ.
ಮೇ 10 ರಂದು, ಭಾರತೀಯ ಸೇನೆಯ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರನ್ನು, ಪಾಕಿಸ್ತಾನದಲ್ಲಿನ ಡಿಜಿಎಂಒ ಸಂಪರ್ಕಿಸಿದ್ದರು. ಇದು ಎಲ್‌ಒಸಿಯಲ್ಲಿ ಗುಂಡಿನ ದಾಳಿ ಮತ್ತು ಮಿಲಿಟರಿ ಕ್ರಮವನ್ನು ನಿಲ್ಲಿಸುವ ಬಗ್ಗೆ ತಿಳುವಳಿಕೆಗೆ ಕಾರಣವಾಯಿತು.
ಈ ವರ್ಷದ ಆರಂಭದಲ್ಲಿ, ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ನಾಯಕ ನೂರ್ ವಾಲಿ ಮೆಹ್ಸೂದ್ ಅವರನ್ನು ನಿರ್ಮೂಲನೆ ಮಾಡಲು ಕಾಬೂಲ್ ಮೇಲೆ ಪಾಕಿಸ್ತಾನದ ವೈಮಾನಿಕ ದಾಳಿಯ ನಂತರ, ಅಕ್ಟೋಬರ್ ಆರಂಭದಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ಗಡಿ ಸಂಘರ್ಷ ಪ್ರಾರಂಭವಾಯಿತು. ಅಫ್ಘಾನಿಸ್ತಾನ ದಾಳಿಗೆ ಬಲವಾಗಿ ಪ್ರತಿಕ್ರಿಯಿಸಿತು, ನಂತರ ಸಂಘರ್ಷ ಉಲ್ಬಣಗೊಂಡಿತು.
ಸಿಎಫ್‌ಆರ್ ವರದಿ 2026 ರಲ್ಲಿ "ಗಡಿಯಾಚೆಗಿನ ಉಗ್ರಗಾಮಿ ದಾಳಿ" ಯಿಂದ ಪ್ರಚೋದಿಸಲ್ಪಟ್ಟ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವೆ ಸಶಸ್ತ್ರ ಸಂಘರ್ಷದ "ಮಧ್ಯಮ ಸಾಧ್ಯತೆ" ಇದೆ ಎಂದು ಹೇಳಿದೆ.