ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಸಂಘರ್ಷದ ನಡುವೆ ಮಧ್ಯಸ್ಥಿಕೆ ವಹಿಸಿದ್ದೆವು ಎಂಬ ಚೀನಾದ ಹೇಳಿಕೆಯನ್ನು ಭಾರತ ತಿರಸ್ಕರಿಸಿದ್ದು, ಕದನ ವಿರಾಮ ನಿರ್ಧಾರದಲ್ಲಿ ಯಾವುದೇ ಮೂರನೇ ವ್ಯಕ್ತಿ ಭಾಗಿಯಾಗಿಲ್ಲ ಎಂದು ಪುನರುಚ್ಚರಿಸಿದೆ.
ಈ ಕುರಿತು ವಿದೇಶಾಂಗ ಇಲಾಖೆ ಪ್ರತಿಕ್ರಿಯಿಸಿದ್ದು, ಮಧ್ಯಸ್ಥಿಕೆಯ ಬಗ್ಗೆ ನಮ್ಮ ನಿಲುವು ಯಾವಾಗಲೂ ಸ್ಪಷ್ಟವಾಗಿದೆ. ಆಪರೇಷನ್ ಸಿಂಧೂರ್ ನಂತರ ಯಾವುದೇ ಮಧ್ಯಸ್ಥಿಕೆ ನಡೆದಿಲ್ಲ. ಮೂರನೇ ವ್ಯಕ್ತಿಯ ಹಸ್ತಕ್ಷೇಪ ಸಾಧ್ಯವಿಲ್ಲ ಎಂದು ಹೇಳಿದೆ.
ಆಪರೇಷನ್ ಸಿಂಧೂರ್ ಬಳಿಕ ಪಾಕಿಸ್ತಾನವು ಕದನ ವಿರಾಮಕ್ಕಾಗಿ ಭಾರತದ ಡಿಜಿಎಂಒ ಅವರನ್ನು ವಿನಂತಿಸಿತು. ಉಭಯ ದೇಶಗಳ ಡಿಜಿಎಂಒಗಳ ನಡುವೆ ಮೇ 10, 2025ರಂದು ಮಧ್ಯಾಹ್ನ 3.35ಕ್ಕೆ ಪ್ರಾರಂಭವಾಗಿ ದೂರವಾಣಿ ಕರೆಯಲ್ಲಿ ತಿಳುವಳಿಕೆಯ ನಿರ್ದಿಷ್ಟ ದಿನಾಂಕ, ಸಮಯ ಮತ್ತು ಮಾತುಗಳನ್ನು ರೂಪಿಸಲಾಯಿತು ಎಂದು ತಿಳಿಸಿದೆ.
ನಾವು ಈಗಾಗಲೇ ಅಂತಹ ಹೇಳಿಕೆಯನ್ನು ನಿರಾಕರಿಸಿದ್ದೇವೆ. ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ವಿಷಯಗಳಲ್ಲಿ, ಮೂರನೇ ವ್ಯಕ್ತಿಗೆ ಯಾವುದೇ ಪಾತ್ರವಿಲ್ಲ. ಭಾರತ-ಪಾಕಿಸ್ತಾನ ಕದನ ವಿರಾಮವನ್ನು ಎರಡೂ ದೇಶಗಳ ಡಿಜಿಎಂಒಗಳು ನೇರವಾಗಿ ಒಪ್ಪಿಕೊಂಡಿದ್ದಾರೆ ಎಂದು ಹೇಳಿದೆ.
ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ, ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಸೇನಾ ಘರ್ಷಣೆ ಉಂಟಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ‘ಆಪರೇಷನ್ ಸಿಂಧೂರ್’ ಆರಂಭಿಸಿತ್ತು. ನಂತರ ಈ ಕಾರ್ಯಾಚರಣೆ ಮಿಲಿಟರಿ ನೆಲೆಗಳವರೆಗೆ ವಿಸ್ತರಿಸಿತ್ತು.
ಮೇ 10ರಂದು ಜಾರಿಯಾದ ಕದನ ವಿರಾಮವು ಎರಡೂ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ (ಡಿಜಿಎಂಒಗಳು) ನಡುವಿನ ನೇರ ಮಾತುಕತೆಯ ಫಲವಾಗಿದೆ ಎಂದು ಭಾರತ ಸ್ಪಷ್ಟಪಡಿಸಿದೆ.
ಭಾರತ–ಪಾಕಿಸ್ತಾನ ಕದನ ವಿರಾಮದ ನಿರ್ಧಾರದಲ್ಲಿ ಯಾವುದೇ ಮೂರನೇ ವ್ಯಕ್ತಿಯ ಪಾತ್ರವಿಲ್ಲ. ಈ ನಿಲುವನ್ನು ನಾವು ಈಗಾಗಲೇ ಹಲವಾರು ಬಾರಿ ಸ್ಪಷ್ಟಪಡಿಸಿದ್ದೇವೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ.