ಫರಿದಾಬಾದ್: ಚಲಿಸುವ ವ್ಯಾನ್‌ನಲ್ಲಿ 25 ವರ್ಷದ ವಿವಾಹಿತ ಮಹಿಳೆ ಮೇಲೆ ಎರಡು ಗಂಟೆಗಳಿಗೂ ಹೆಚ್ಚು ಸಾಮೂಹಿಕ ಅತ್ಯಾಚಾರ ನಡೆಸಿ ನಂತರ ರಸ್ತೆಗೆ ಎಸೆಯಲಾಗಿದ್ದು, ಆಕೆಯ ತಲೆಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಸೋಮವಾರ ತಡರಾತ್ರಿ ವಿವಾಹಿತ ಮಹಿಳೆ ಮನೆಗೆ ಹೋಗಲು ಇತರ ವಾಹನಕ್ಕಾಗಿ ಕಾಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ವ್ಯಾನ್ ನಿಲ್ಲಿಸಿದ ಇಬ್ಬರು ಯುವಕರು ಆಕೆಯನ್ನು ಮನೆಗೆ ಬಿಡುವುದಾಗಿ ಭರವಸೆ ನೀಡಿ ವಾಹನಕ್ಕೆ ಹತ್ತಿಸಿಕೊಂಡಿದ್ದಾರೆ. ಬಳಿಕ ವಾಹನ ಗುರ್ಗಾಂವ್ ರಸ್ತೆಯ ಕಡೆಗೆ ತೆರಳಿದೆ.
ಮಹಿಳೆ ಸದ್ಯ ಚಿಕಿತ್ಸೆ ಪಡೆಯುತ್ತಿದ್ದು, ಹೇಳಿಕೆ ದಾಖಲಿಸಲು ಇನ್ನೂ ಸದೃಢವಾಗಿಲ್ಲ. ಆರೋಪಿಗಳು ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದವರಾಗಿದ್ದು, ಸದ್ಯ ಫರಿದಾಬಾದ್‌ನಲ್ಲಿ ವಾಸಿಸುತ್ತಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರು ಬಳಸುತ್ತಿದ್ದ ವ್ಯಾನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ಸೋದರಿ ನೀಡಿದ ದೂರಿನ ಪ್ರಕಾರ, ಆ ಮಹಿಳೆ ವಿವಾಹಿತಳಾಗಿದ್ದು, ಮೂವರು ಮಕ್ಕಳಿದ್ದಾರೆ ಮತ್ತು ಕೌಟುಂಬಿಕ ಕಲಹದಿಂದಾಗಿ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಆಕೆ ತನ್ನ ಹೆತ್ತವರ ಮನೆಯಲ್ಲಿ ವಾಸಿಸುತ್ತಿದ್ದಳು.
ಸೋಮವಾರ ಸಂಜೆ ಸೆಕ್ಟರ್ 23 ರಲ್ಲಿರುವ ತನ್ನ ಸ್ನೇಹಿತನ ಮನೆಗೆ ಹೋಗಿದ್ದಳು ಮತ್ತು ತಡರಾತ್ರಿ ಹಿಂತಿರುಗುವಾಗ, ಆರೋಪಿಗಳು ಅವಳಿಗೆ ಲಿಫ್ಟ್ ನೀಡುವ ನೆಪದಲ್ಲಿ ವಾಹನ ಹತ್ತಿಸಿಕೊಂಡು ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
'ಮಹಿಳೆಯನ್ನು ರಾತ್ರಿಯಿಡೀ ಓಡಾಡಿಸಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ರಾಜಾ ಚೌಕ್ ಬಳಿ ಕಾರಿನಿಂದ ಹೊರಗೆ ಎಸೆಯಲಾಗಿದೆ. ಆಕೆಗೆ ಗಂಭೀರ ಗಾಯಗಳಾಗಿವೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಳಿಕ ಮಹಿಳೆ ತನ್ನ ಸಹೋದರಿಗೆ ಕರೆ ಮಾಡುವಲ್ಲಿ ಯಶಸ್ವಿಯಾಗಿದ್ದಾಳೆ. ಅವರು ಸ್ಥಳಕ್ಕೆ ಬಂದು ಬಾದ್‌ಶಾ ಖಾನ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
'ನಾವು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ. ಆರೋಪಿಗಳ ಗುರುತಿನ ಪರೀಕ್ಷೆಯ ಪರೇಡ್ ಶೀಘ್ರದಲ್ಲೇ ನಡೆಯಲಿದೆ' ಎಂದು ಫರಿದಾಬಾದ್ ಪೊಲೀಸರ ವಕ್ತಾರ ಯಶ್‌ಪಾಲ್ ಯಾದವ್ ತಿಳಿಸಿದ್ದಾರೆ.