ನವದೆಹಲಿ: ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಖರೀದಿಸಲು ಪ್ರಯತ್ನಿಸಿದೆ ಎಂಬ ಎಎಪಿ ನಾಯಕರ ಆರೋಪದ ಬಗ್ಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ಶುಕ್ರವಾರ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದಿಂದ ತನಿಖೆಗೆ ಆದೇಶಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಷ್ಣು ಮಿತ್ತಲ್ ಅವರು ಲೆಫ್ಟಿನೆಂಟ್ ಗವರ್ನರ್ ಕಚೇರಿಗೆ ಸಲ್ಲಿಸಿದ ದೂರಿನ ಆಧಾರದ ಮೇಲೆ ಎಸಿಬಿ ತನಿಖೆಗೆ ಆದೇಶಿಸುವಂತೆ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಲಾಗಿದೆ.
ಫೆಬ್ರವರಿ 8 ರಂದು ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುವ ಮುನ್ನ ಬಿಜೆಪಿ, ತಮ್ಮ ಪಕ್ಷದ 16 ಅಭ್ಯರ್ಥಿಗಳನ್ನು ಖರೀಸಿಲು ಪ್ರಯತ್ನಿಸುತ್ತಿದೆ ಎಂದು ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಗುರುವಾರ ಆರೋಪಿಸಿದ್ದರು.
ಎಎಪಿ ಅಭ್ಯರ್ಥಿಗಳು, ಬಿಜೆಪಿ ಸೇರಿದರೆ ಸಚಿವ ಸ್ಥಾನ ಮತ್ತು ತಲಾ 15 ಕೋಟಿ ರೂ.ಗಳ ನೀಡುವ ಆಫರ್ ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಮತ್ತು ಇತರ ಆಪ್ ನಾಯಕರು ಸಹ ಇದೇ ರೀತಿಯ ಆರೋಪಗಳನ್ನು ಮಾಡಿದ್ದಾರೆ.
ಯಾವುದೇ ಪುರಾವೆಗಳಿಲ್ಲದೆ ಎಎಪಿ ನಾಯಕರು ಮಾಡಿರುವ ಆರೋಪಗಳ ಬಗ್ಗೆ ತನಿಖೆಯ ಅಗತ್ಯವಿದೆ. ಇದು ಗಂಭೀರ ವಿಷಯವಾಗಿದೆ ಎಂದು ಲೆಫ್ಟಿನೆಂಟ್ ಗವರ್ನರ್ ಗೆ ಬರೆದ ಪತ್ರದಲ್ಲಿ ಮಿತ್ತಲ್ ಹೇಳಿದ್ದಾರೆ.
ಎಎಪಿ ನಾಯಕರು ಇಂತಹ "ಸುಳ್ಳು ಮತ್ತು ದಾರಿತಪ್ಪಿಸುವ ಮಾಹಿತಿಯನ್ನು" ಹರಡುವ ಮೂಲಕ ದೆಹಲಿಯಲ್ಲಿ "ಭಯ ಮತ್ತು ಅಶಾಂತಿಯನ್ನು" ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.