ಫೆಬ್ರವರಿ 5 ರಂದು ನಡೆದ ದೆಹಲಿಯಲ್ಲಿ ವಿಧಾನಸಭಾ ಚುನಾವಣೆಗೆ ಫಲಿತಾಂಶ ಇಂದು ಪ್ರಕಟಗೊಳ್ಳಲಿದ್ದು, ಮತ ಎಣಿಕೆ ಪ್ರಕ್ರಿಯೆ ಇಂದು (ಫೆಬ್ರವರಿ 8) ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ.
ದೆಹಲಿಯ ಎಲ್ಲಾ 70 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 5ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು ಆಮ್ ಆದ್ಮಿ ಪಕ್ಷ (ಎಎಪಿ), ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್ ಪಕ್ಷಗಳು ದೆಹಲಿಯಲ್ಲಿ ಸ್ಪರ್ಧಿಸಿದ ಪ್ರಮುಖ 3 ಪಕ್ಷಗಳಾಗಿವೆ.
ಈ ಬಾರಿಯ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಹುತೇಕ ಸಮೀಕ್ಷೆಗಳು ಬಿಜೆಪಿಗೆ ಬಹುಮತ ಸಿಗಲಿದೆ ಎಂದು ಭವಿಷ್ಯ ನುಡಿದಿವೆ. ಆದರೆ, ಆಮ್ ಆದ್ಮಿ ಪಕ್ಷ ಈ ಸಮೀಕ್ಷೆಗಳನ್ನು ನಿರಾಕರಿಸಿದ್ದು, ತಮ್ಮ ಪಕ್ಷವೇ ಅಧಿಕಾರಕ್ಕೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.
ಫಲಿತಾಂಶದ ದಿನದಂದು ಎಲ್ಲರಿಗೂ ಆತಂಕ ಇದ್ದೇ ಇರುತ್ತದೆ. ನಾವು ಕೂಡ ಮನುಷ್ಯರು... ಆದರೆ, ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ಕೆಲಸ ಮಾಡಿರುವುದರಿಂದ ಸರ್ಕಾರ ರಚಿಸುವ ವಿಶ್ವಾಸವಿದೆ. ಜನರು ಪ್ರಾಮಾಣಿಕತೆ ಮತ್ತು ಕೆಲಸ ಮಾಡಿದ ಪಕ್ಷಕ್ಕೆ ಮತ ಹಾಕಿದ್ದಾರೆ. ನಾವು ಈ ಭಾರಿ ಬಹುಮತದೊಂದಿಗೆ ಸರ್ಕಾರ ರಚಿಸಲಿದ್ದೇವೆ. ಜನರು ತಮ್ಮ ತೀರ್ಪನ್ನು ನೀಡಿದ್ದಾರೆ, ಇದು ಕೆಲವೇ ಗಂಟೆಗಳಲ್ಲಿ ಪ್ರಕಟಗೊಳ್ಳಳಿದೆ ಎಂದು ಆಪ್ ನಾಯಕ ಮನೀಶ್ ಸಿಸೋಡಿಯಾ ಅವರು ಹೇಳಿದ್ದಾರೆ.
ಇದು ಸಾಮಾನ್ಯ ಚುನಾವಣೆಯಲ್ಲ, ಧರ್ಮ ಹಾಗೂ ಅಧರ್ಮ ನಡುವಿನ ಹೋರಾಟವಾಗಿತ್ತು. ದೆಹಲಿಯ ಜನರು ಒಳ್ಳೆಯವರು, ಎಎಪಿ ಮತ್ತು ಅರವಿಂದ್ ಕೇಜ್ರಿವಾಲ್ ಜೊತೆ ನಿಲ್ಲುತ್ತಾರೆ ಎಂಬ ವಿಶ್ವಾಸ ನನಗಿದೆ. ಕೇಜ್ರಿವಾಲ್ ಅವರು 4ನೇ ಬಾರಿಗೆ ಮುಖ್ಯಮಂತ್ರಿಯಾಗುತ್ತಾರೆ ಎಂದು ದೆಹಲಿ ಮುಖ್ಯಮಂತ್ರಿ ಅತಿಶಿ ಅವರು ಹೇಳಿದ್ದಾರೆ.
ದೆಹಲಿ ಚುನಾವಣೆಗೆ ಫಲಿತಾಂಶದ ಆರಂಭಿಕ ಹಂತದಲ್ಲಿ ಅಂಚೆ ಮತಗಳ ಎಣಿಕೆ ಕಾರ್ಯ ಶುರುವಾಗಿದ್ದು, 8 ಗಂಟೆಗೆ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ಅಂಚೆ ಮತಪತ್ರಗಳನ್ನು ಮಹಾರಾಣಿ ಬಾಗ್ನ ಮೀರಾಬಾಯಿ ಡಿಎಸ್‌ಇಯು ಎಣಿಕೆ ಕೇಂದ್ರಕ್ಕೆ ತರಲಾಗಿದೆ.
ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ. ಆಮ್ ಆದ್ಮಿ ಪಕ್ಷ (AAP), ಭಾರತೀಯ ಜನತಾ ಪಕ್ಷ (BJP) ಮತ್ತು ಕಾಂಗ್ರೆಸ್ 70 ಸ್ಥಾನಗಳ ವಿಧಾನಸಭೆಯ ಮೇಲೆ ಹಿಡಿತ ಸಾಧಿಸಲು ಪೈಪೋಟಿ ನಡೆಸುತ್ತಿವೆ. ಕಳೆದ ಬುಧವಾರ ನಡೆದ ಚುನಾವಣೆಯಲ್ಲಿ ಶೇ. 60.54 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
2013 ರಿಂದ ಅಧಿಕಾರದಲ್ಲಿರುವ ಎಎಪಿ ಸತತ ನಾಲ್ಕನೇ ಅವಧಿಗೆ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದೆ, ಆದರೆ 1993 ರಲ್ಲಿ ಕೊನೆಯ ಬಾರಿಗೆ ರಾಜಧಾನಿಯನ್ನು ಗೆದ್ದ ಬಿಜೆಪಿ 27 ವರ್ಷಗಳ ನಂತರ ಅಧಿಕಾರಕ್ಕೆ ಬರಲು ಉತ್ಸುಕವಾಗಿದೆ.
1998 ರಿಂದ 2013 ರವರೆಗೆ ದೆಹಲಿಯಲ್ಲಿ ಪ್ರಾಬಲ್ಯ ಹೊಂದಿದ್ದ ಕಾಂಗ್ರೆಸ್, ಕಳೆದ ಎರಡು ಚುನಾವಣೆಗಳಲ್ಲಿ ಯಾವುದೇ ಸ್ಥಾನಗಳನ್ನು ಪಡೆಯಲು ವಿಫಲವಾದ ನಂತರ ಸರಣಿ ಸೋಲುಗಳಿಂದ ಚೇತರಿಸಿಕೊಳ್ಳುವ ಗುರಿಯನ್ನು ಹೊಂದಿದೆ.
ಎಕ್ಸಿಟ್ ಪೋಲ್ ಗಳು ಬಿಜೆಪಿಗೆ ಅನುಕೂಲಕರವಾಗಿದ್ದು, ಆಡಳಿತ ವಿರೋಧಿ ಅಲೆ ಮಾತ್ರವಲ್ಲದೆ ಅದರ ರಾಜಕೀಯ ಉಳಿವಿಗಾಗಿಯೂ ಹೋರಾಡುತ್ತಿರುವ ಎಎಪಿಗೆ ಪ್ರಮುಖ ಸವಾಲನ್ನು ಒಡ್ಡುತ್ತಿದೆ. ಎಎಪಿ ಸಂಚಾಲಕ ಮತ್ತು ಮುಖ್ಯಮಂತ್ರಿ ಅಭ್ಯರ್ಥಿ ಅರವಿಂದ್ ಕೇಜ್ರಿವಾಲ್ ನಾಲ್ಕನೇ ಅವಧಿಗೆ ತಮ್ಮ ಪರಂಪರೆಯನ್ನು ಭದ್ರಪಡಿಸಿಕೊಳ್ಳಲು ನೋಡುತ್ತಿದ್ದಾರೆ. ಎಕ್ಸಿಟ್ ಪೋಲ್ ಗಳ ಭವಿಷ್ಯವಾಣಿಗಳನ್ನು ತಿರಸ್ಕರಿಸಿರುವ ಆಪ್ ಕೇಜ್ರಿವಾಲ್ ನಾಯಕತ್ವದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುತ್ತದೆ ಎಂದು ಪ್ರತಿಪಾದಿಸಿದೆ.
2015 ರ ಭರ್ಜರಿ ಗೆಲುವು, 70 ಸ್ಥಾನಗಳಲ್ಲಿ 67 ಸ್ಥಾನಗಳನ್ನು ಗಳಿಸುವ ಮೂಲಕ ಎಎಪಿ ಮತ್ತು 2020 ರಲ್ಲಿ 62 ಸ್ಥಾನಗಳನ್ನು ಪಡೆಯುವ ಮೂಲಕ ದೆಹಲಿಯಲ್ಲಿ ತನ್ನ ಪ್ರಾಬಲ್ಯವನ್ನು ಗಟ್ಟಿಗೊಳಿಸಿತ್ತು. ಇಂದಿನ ಚುನಾವಣೆಯಲ್ಲಿ ಆಪ್ ಗೆದ್ದರೆ ಕೇಜ್ರಿವಾಲ್ ಅವರ ರಾಷ್ಟ್ರೀಯ ರಾಜಕೀಯ ಸ್ಥಾನಮಾನವನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಬಿಜೆಪಿ ಜಯಶಾಲಿಯಾದರೆ, ಸುಮಾರು ಮೂರು ದಶಕಗಳ ನಂತರ ದೆಹಲಿಯನ್ನು ಮರಳಿ ಪಡೆಯುವುದಲ್ಲದೆ, ನಗರದ ಮೇಲಿನ ಎಎಪಿಯ ಭದ್ರಕೋಟೆಯನ್ನು ಮುರಿಯುತ್ತದೆ, ಇದು ಗಮನಾರ್ಹ ರಾಜಕೀಯ ಬದಲಾವಣೆಯನ್ನು ಸೂಚಿಸುತ್ತದೆ.
ಜನರು ಅಭಿವೃದ್ಧಿಯ ರಾಜಕೀಯಕ್ಕೆ ಮತ ಹಾಕಿದ್ದಾರೆ ಎಂದು ನಮಗೆ ಖಚಿತವಾಗಿದೆ. ಅರವಿಂದ್ ಕೇಜ್ರಿವಾಲ್ 4 ನೇ ಬಾರಿಗೆ ಮುಖ್ಯಮಂತ್ರಿಯಾಗಲಿದ್ದಾರೆ. ವಿವಿಧ ಚುನಾವಣೆಗಳಲ್ಲಿ ದತ್ತಾಂಶದಲ್ಲಿ ವ್ಯತ್ಯಾಸಗಳಾಗಿವೆ. ನಮ್ಮಲ್ಲಿದ್ದ ಫಾರ್ಮ್ -17 ಅಂಕಿಅಂಶವನ್ನು ಅಪ್‌ಲೋಡ್ ಮಾಡಿದ್ದೇವೆ. ಬಿಜೆಪಿ ಮತ್ತು ಕಾಂಗ್ರೆಸ್ ಈ ಚುನಾವಣೆಯಲ್ಲಿ ರಹಸ್ಯ ಮೈತ್ರಿ ಮಾಡಿಕೊಂಡಿವೆ ಎಂದು ಎಎಪಿ ವಕ್ತಾರೆ ಪ್ರಿಯಾಂಕಾ ಕಕ್ಕರ್ ಆರೋಪಿಸಿದ್ದಾರೆ.
ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಆರಂಭಿಕ ಮತ ಎಣಿಕೆಯಲ್ಲಿ ಎಎಪಿ ಮತ್ತು ಬಿಜೆಪಿ ಸಮಬಲ ಸಾಧಿಸುತ್ತಿವೆ. ಕೇಜ್ರಿವಾಲ್, ಸಿಸೋಡಿಯಾ, ಅತಿಶಿಗೆ ಆರಂಭಿಕ ಹಿನ್ನಡೆಯಾಗಿದ್ದು, ಅಂಚಮತ ಪತ್ರದ ಎಣಿಕೆ ವೇಳೆ ಎಎಪಿ ದಿಗ್ಗಜರಿಗೆ ಹಿನ್ನಡೆಯುಂಟಾಗಿದೆ.
ಇಂದು ಶನಿವಾರ ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಮುಂದುವರೆದಿದ್ದು, ಆರಂಭಿಕ ಟ್ರೆಂಡ್‌ಗಳಲ್ಲಿ ಭಾರತೀಯ ಜನತಾ ಪಕ್ಷ 37 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಬಹುಮತದ ಗಡಿ ದಾಟಿದರೆ, ಆಮ್ ಆದ್ಮಿ ಪಕ್ಷ 27 ಮತ್ತು ಕಾಂಗ್ರೆಸ್ ಒಂದು ಸ್ಥಾನದಲ್ಲಿ ಮುಂದಿದೆ.
ಇತ್ತೀಚಿನ ಟ್ರೆಂಡ್‌ಗಳ ಪ್ರಕಾರ, ದೆಹಲಿ ಕ್ಷೇತ್ರದಲ್ಲಿ ಬಿಜೆಪಿಯ ಪರ್ವೇಶ್ ವರ್ಮಾ ವಿರುದ್ಧ ಸ್ಪರ್ಧಿಸಿರುವ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹಿನ್ನಡೆಯಲ್ಲಿದ್ದಾರೆ. ಕಲ್ಕಾಜಿ ಕ್ಷೇತ್ರದಲ್ಲಿ, ಮುಖ್ಯಮಂತ್ರಿ ಅತಿಶಿ ಬಿಜೆಪಿಯ ರಮೇಶ್ ಬಿಧುರಿಗಿಂತ ಹಿಂದುಳಿದಿದ್ದಾರೆ.
ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೂಡ ಜಂಗ್‌ಪುರದಲ್ಲಿ ಹಿನ್ನಡೆಯಲ್ಲಿದ್ದಾರೆ. ಬಿಜೆಪಿಯ ಕರವಾಲ್ ನಗರ ಅಭ್ಯರ್ಥಿ ಕಪಿಲ್ ಮಿಶ್ರಾ ಮುನ್ನಡೆಯಲ್ಲಿದ್ದರೆ, ಆಪ್‌ನ ಸೌರಭ್ ಭಾರದ್ವಾಜ್ ಗ್ರೇಟರ್ ಕೈಲಾಶ್ ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ.
ದೆಹಲಿಯಲ್ಲಿ ಆಪ್‌ನ ರಾಜಕೀಯ ಪ್ರಾಬಲ್ಯ ಹಾಗೆಯೇ ಉಳಿದಿದೆಯೇ ಅಥವಾ 1998 ರ ನಂತರ ಮೊದಲ ಬಾರಿಗೆ ಕೇಸರಿ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆಯೇ ಎಂದು ಇನ್ನು ಕೆಲವೇ ಕ್ಷಣಗಳಲ್ಲಿ ಸ್ಪಷ್ಟವಾಗುತ್ತದೆ. 1998 ರಿಂದ 2013 ರವರೆಗೆ ದೆಹಲಿಯನ್ನು ಆಳಿದ ಕಾಂಗ್ರೆಸ್, ಹಿಂದಿನ ಎರಡು ಚುನಾವಣೆಗಳಲ್ಲಿ ಒಂದೇ ಒಂದು ಸ್ಥಾನವನ್ನು ಗೆಲ್ಲಲು ವಿಫಲವಾದ ನಂತರ ಮತ್ತೆ ಅಧಿಕಾರಕ್ಕೆ ಮರಳಲು ನೋಡುತ್ತಿದೆ.
1.55 ಕೋಟಿ ಅರ್ಹ ಮತದಾರರನ್ನು ಹೊಂದಿರುವ ದೆಹಲಿ, ಫೆಬ್ರವರಿ 5 ರ ಚುನಾವಣೆಯಲ್ಲಿ ಶೇಕಡಾ 60.54 ರಷ್ಟು ಮತದಾನ ದಾಖಲಿಸಿದೆ.
ಚುನಾವಣಾ ಆಯೋಗದ ಆರಂಭಿಕ ಟ್ರೆಂಡ್‌ಗಳ ಪ್ರಕಾರ, ದೆಹಲಿಯ 70 ವಿಧಾನಸಭಾ ಸ್ಥಾನಗಳಲ್ಲಿ ಬಿಜೆಪಿ 43 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಎಎಪಿ 27 ಸ್ಥಾನಗಳಲ್ಲಿ ಮುಂದಿದೆ.
ದೆಹಲಿಯಲ್ಲಿ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ 343 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ, ಆದರೆ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜಗ್‌ಪುರದಲ್ಲಿ 1,314 ಮತಗಳಿಂದ ಹಿಂದುಳಿದಿದ್ದಾರೆ. ಕಲ್ಕಾಜಿಯಲ್ಲಿ ಮುಖ್ಯಮಂತ್ರಿ ಅತಿಶಿ ಕೂಡ ಬಿಜೆಪಿಯ ರಮೇಶ್ ಬಿಧುರಿಗಿಂತ 1,149 ಮತಗಳಿಂದ ಹಿಂದಿದ್ದಾರೆ.
ಮುಸ್ತಾಬಾದ್‌ನಲ್ಲಿ, ಬಿಜೆಪಿಯ ಮೋಹನ್ ಸಿಂಗ್ ಬಿಶ್ಟ್ 16,181 ಮತಗಳಿಂದ ಮುನ್ನಡೆ ಸಾಧಿಸಿದ್ದರೆ, ಎಎಪಿಯ ಅಮಾನತುಲ್ಲಾ ಖಾನ್ ಓಖ್ಲಾದಲ್ಲಿ ಬಿಜೆಪಿಯ ಮನೀಷ್ ಚೌಧರಿಗಿಂತ 2,260 ಮತಗಳಿಂದ ಹಿಂದಿದ್ದಾರೆ.
ಗ್ರೇಟರ್ ಕೈಲಾಶ್‌ನಲ್ಲಿ ಎಎಪಿಯ ಸೌರಭ್ ಭಾರದ್ವಾಜ್ 459 ಮತಗಳಿಂದ ಹಿಂದಿದ್ದರೆ, ಬಾಬರ್‌ಪುರದಲ್ಲಿ ಗೋಪಾಲ್ ರೈ 8,995 ಮತಗಳಿಂದ ಮುಂದಿದ್ದಾರೆ.
ಬಿಜೆಪಿಯ ಕಪಿಲ್ ಮಿಶ್ರಾ ಅವರು ಕರವಾಲ್ ನಗರದಲ್ಲಿ 8,603 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ, ಆದರೆ ಪಕ್ಷದ ಅಭ್ಯರ್ಥಿಗಳು ಶಹದಾರ, ಸಂಗಮ್ ವಿಹಾರ್, ಕಿರಾರಿ ಮತ್ತು ಛತ್ತರ್‌ಪುರದಲ್ಲಿಯೂ ಮುನ್ನಡೆ ಸಾಧಿಸಿದ್ದಾರೆ. ರಾಜಿಂದರ್ ನಗರ, ತ್ರಿಲೋಕ್‌ಪುರಿ ಮತ್ತು ಸೀಮಾಪುರಿಯಲ್ಲೂ ಕೇಸರಿ ಪಕ್ಷ ಮುನ್ನಡೆ ಕಾಯ್ದುಕೊಂಡಿದೆ.
26 ವರ್ಷಗಳಿಗೂ ಹೆಚ್ಚು ಕಾಲದ ನಂತರ ನಿರ್ಣಾಯಕ ಜನಾದೇಶದೊಂದಿಗೆ ಕೇಸರಿ ಪಕ್ಷವು ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರಕ್ಕೆ ಮರಳುತ್ತಿರುವುದನ್ನು ಇತ್ತೀಚಿನ ಎಣಿಕೆಯ ಟ್ರೆಂಡ್‌ಗಳು ತೋರಿಸುತ್ತಿದ್ದಂತೆ ದೆಹಲಿಯ ಪ್ರಧಾನ ಕಚೇರಿಯ ಹೊರಗೆ ಬಿಜೆಪಿ ಬೆಂಬಲಿಗರು ಸಂಭ್ರಮಾಚರಣೆಯಲ್ಲಿ ತೊಡಗಿದರು.
ಬೆಂಬಲಿಗರು 'ಧೋಲ್' ಬಡಿತಕ್ಕೆ ನೃತ್ಯ ಮಾಡಿದರು ಮತ್ತು ಪಕ್ಷದ ಧ್ವಜಗಳನ್ನು ಬೀಸಿದರು, ಹಬ್ಬದ ವಾತಾವರಣವನ್ನು ಸೃಷ್ಟಿಸಿದರು. ಬಿಜೆಪಿಯ ಚುನಾವಣಾ ಚಿಹ್ನೆಯಾದ ಕಮಲದ ಕಟೌಟ್‌ಗಳನ್ನು ಹಿಡಿದುಕೊಂಡು, ಅವರು ಪರಸ್ಪರ ಕೇಸರಿ ಬಣ್ಣದ ಪುಡಿಯನ್ನು ಎರಚಿಕೊಂಡರು.
ಚುನಾವಣಾ ಆಯೋಗ ಬಿಡುಗಡೆ ಮಾಡಿದ ಇತ್ತೀಚಿನ ಟ್ರೆಂಡ್‌ಗಳ ಪ್ರಕಾರ, ದೆಹಲಿಯ 70 ವಿಧಾನಸಭಾ ಸ್ಥಾನಗಳಲ್ಲಿ 41 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರೆ, ಎಎಪಿ 29 ಸ್ಥಾನಗಳಲ್ಲಿ ಮುಂದಿದೆ.
ಆರಂಭಿಕ ಟ್ರೆಂಡ್‌ಗಳು ಬಿಜೆಪಿಗೆ ಗಮನಾರ್ಹ ಮುನ್ನಡೆ ತೋರಿಸುವುದರೊಂದಿಗೆ, ದೆಹಲಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು ರಾಷ್ಟ್ರ ರಾಜಧಾನಿಯಲ್ಲಿ ಸರ್ಕಾರ ರಚಿಸುವ ಪಕ್ಷದ ವಿಶ್ವಾಸವನ್ನು ಪುನರುಚ್ಚರಿಸಿದರು. ಮುಂದಿನ ದೆಹಲಿ ಮುಖ್ಯಮಂತ್ರಿ ಬಿಜೆಪಿಯಿಂದ ಬರುತ್ತಾರೆ ಮತ್ತು ಕೇಂದ್ರ ನಾಯಕತ್ವವು ಅದು ಯಾರಾಗಬೇಕೆಂದು ನಿರ್ಧರಿಸುತ್ತದೆ ಎಂದು ಅವರು ಹೇಳಿದರು.
ದೆಹಲಿ ವಿಧಾನಸಬಾ ಚುನಾವಣಾ ಫಲಿತಾಂಶ ಭಾರೀ ಕುತೂಹಲ ಕೆರಳಿಸಿದ್ದು, ಉಚಿತ ಗ್ಯಾರಂಟಿ ಘೋಷಿಸಿದ್ದ ಕಾಂಗ್ರೆಸ್ ಪಕ್ಷ ಒಂದೇ ಒಂದು ಕ್ಷೇತ್ರದಲ್ಲಿಯೂ ಖಾತೆ ತೆರೆಯದೆ ಭಾರೀ ಮುಖಭಂಗ ಅನುಭವಿಸಿದೆ.