ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ 47 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ದೆಹಲಿಯಲ್ಲಿ ಸುದೀರ್ಘ ಅವಧಿಯ ಬಳಿಕ ಅಧಿಕಾರ ಹಿಡಿದಿದೆ.
ದೆಹಲಿ ಚುನಾವಣೆಯಲ್ಲಿ ಬಿಜೆಪಿ ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡಿರಲಿಲ್ಲ. ಸಹಜವಾಗಿಯೇ ದೆಹಲಿ ನೂತನ ಸಿಎಂ ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿದೆ.
ಈ ಬಗ್ಗೆ ದೆಹಲಿ ಬಿಜೆಪಿ ಅಧ್ಯಕ್ಷ ವಿರೇಂದ್ರ ಸಚ್ದೇವ್ ಮಾತನಾಡಿದ್ದು, ಸಿಎಂ ಯಾರಾಗಲಿದ್ದಾರೆ? ಎಂಬ ಪ್ರಶ್ನೆಗೆ ಹೈಕಮಾಂಡ್ ನಿರ್ಧಾರವೇ ಉತ್ತರವಾಗಿರಲಿದೆ ಎಂದಷ್ಟೇ ಹೇಳಿದ್ದಾರೆ.
ಆದಾಗ್ಯೂ ದೆಹಲಿಯ ಸಿಎಂ ಹುದ್ದೆಗೆ ಕೆಲವು ನಾಯಕರ ಹೆಸರು ಮುಂಚೂಣಿಯಲ್ಲಿದೆ. ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ನವದೆಹಲಿ ಕ್ಷೇತ್ರದಿಂದ ಸೋಲಿಸಿದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ದೆಹಲಿ ಸಿಎಂ ಹುದ್ದೆಯ ರೇಸ್ ನಲ್ಲಿರುವ ಪ್ರಮುಖ ನಾಯಕರಾಗಿದ್ದಾರೆ.
ಇವರಷ್ಟೇ ಅಲ್ಲದೇ ದೆಹಲಿಯ ರೋಹಿಣಿ ಕ್ಷೇತ್ರದಲ್ಲಿ ಸತತವಾಗಿ ಗೆಲುವು ಸಾಧಿಸಿರುವ ಬಿಜೆಪಿಯ ಹಿರಿಯ ನಾಯಕ ವಿಜಯೇಂದ್ರ ಗುಪ್ತ ಅವರೂ ಸಿಎಂ ರೇಸ್ ನಲ್ಲಿರುವ ಪ್ರಮುಖ ಅಭ್ಯರ್ಥಿಯಾಗಿದ್ದಾರೆ.
ಅಚ್ಚರಿಯೆಂದರೆ ಒಂದು ವೇಳೆ ದೆಹಲಿಯಲ್ಲಿ ಬಿಜೆಪಿ ಗೆದ್ದರೆ ರಮೇಶ್ ಬಿಧುರಿ ಅವರನ್ನು ಬಿಜೆಪಿ ಸಿಎಂ ಮಾಡಲಿದೆ ಎಂದು ಆಮ್ ಆದ್ಮಿ ಪಕ್ಷ ಹೇಳಿತ್ತು ಅವರ ಹೆಸರೂ ಈಗ ಸಿಎಂ ಹುದ್ದೆ ರೇಸ್ ನಲ್ಲಿ ಕೇಳಿಬರುತ್ತಿದೆ.
ರಾಜೌರಿ ಗಾರ್ಡನ್‌ನಿಂದ ಮಜೀಂದರ್ ಸಿಂಗ್ ಸಿರ್ಸಾ ಮತ್ತು ಕರೋಲ್ ಬಾಗ್‌ನಿಂದ ದುಷ್ಯಂತ್ ಗೌತಮ್ ಅವರ ಹೆಸರುಗಳು ಕೇಳಿಬರುತ್ತಿವೆ.