ಪುಣೆ: 2014 ರ ನಂತರ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಡೆದ "ಅಕ್ರಮಗಳ" ವಿರುದ್ಧ ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಧ್ವನಿ ಎತ್ತುತ್ತಿಲ್ಲ ಎಂದು ಶಿವಸೇನೆ(ಯುಬಿಟಿ) ಸಂಸದ ಸಂಜಯ್ ರಾವತ್ ಆರೋಪಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರು ಹಣದ ಮೇಲೆ ಕೇಂದ್ರೀಕರಿಸಿದ್ದರಿಂದ ಆಮ್ ಆದ್ಮಿ ಪಕ್ಷ(ಎಎಪಿ) ಇತ್ತೀಚಿನ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸೋತಿದೆ ಎಂದು ಅಣ್ಣಾ ಹಜಾರೆ ಇತ್ತೀಚಿಗೆ ಹೇಳಿದ ನಂತರ ರಾವತ್ ಈ ಹೇಳಿಕೆ ನೀಡಿದ್ದಾರೆ.
ಸೇನಾ(ಯುಬಿಟಿ) ನಾಯಕನ ಟೀಕೆಗೆ ಪ್ರತಿಕ್ರಿಯಿಸಿದ ಅಣ್ಣಾ ಹಜಾರೆ ಅವರು, ಕೆಲವರು ತಮ್ಮ ಮಾನಸಿಕ ಸ್ಥಿತಿಗೆ ಅನುಗುಣವಾಗಿ ವಿಷಯಗಳನ್ನು ಗ್ರಹಿಸುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.
"ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರು ಅಣ್ಣಾ ಹಜಾರೆ ಅವರನ್ನು ಮಹಾತ್ಮರನ್ನಾಗಿ ಮಾಡಿದರು. ಅವರಿಲ್ಲದಿದ್ದರೆ ಅಣ್ಣಾ ದೆಹಲಿಯನ್ನು ನೋಡಲು ಅಥವಾ ರಾಮಲೀಲಾ ಮತ್ತು ಜಂತರ್ ಮಂತರ್‌ಗೆ ಭೇಟಿ ನೀಡಲು(ಭ್ರಷ್ಟಾಚಾರದ ವಿರುದ್ಧ ಪ್ರತಿಭಟಿಸಲು) ಸಾಧ್ಯವಿರಲಿಲ್ಲ" ಎಂದು ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾವತ್ ಹೇಳಿದ್ದಾರೆ.
"2014 ರ ನಂತರ, ಬಿಜೆಪಿ ನೇತೃತ್ವದ ಕೇಂದ್ರದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಹಲವು ಅಕ್ರಮಗಳು ನಡೆದಿವೆ. ಆದರೆ ಈ ಬಗ್ಗೆ ಅಣ್ಣಾ ಒಂದೇ ಒಂದು ಮಾತನ್ನೂ ಹೇಳಲಿಲ್ಲ" ಎಂದು ರಾಜ್ಯಸಭಾ ಸದಸ್ಯ ಆರೋಪಿಸಿದ್ದಾರೆ.
ರಾವತ್ ಟೀಕೆಗೆ ಪ್ರತಿಕ್ರಿಯಿಸಿದ ಹಜಾರೆ, "ನಿರ್ದಿಷ್ಟ ಬಣ್ಣದ ಕನ್ನಡಕ ಧರಿಸಿದ ವ್ಯಕ್ತಿ ಜಗತ್ತನ್ನು ಅದಕ್ಕೆ ತಕ್ಕಂತೆ ನೋಡುತ್ತಾನೆ ಎಂದಿದ್ದಾರೆ.