ಸುಪ್ರೀಂ ಕೋರ್ಟ್  
ದೇಶ

ನಾವು ಪರಾವಲಂಬಿಗಳ ವರ್ಗವನ್ನು ಸೃಷ್ಟಿಸುತ್ತಿಲ್ಲವೇ?: ಉಚಿತ ಕೊಡುಗೆಗಳ ಘೋಷಣೆಗೆ ಸುಪ್ರೀಂ ಕೋರ್ಟ್ ಕಿಡಿ

ನಗರ ಪ್ರದೇಶಗಳಲ್ಲಿನ ನಿರಾಶ್ರಿತ ವ್ಯಕ್ತಿಗಳಿಗೆ ಆಶ್ರಯ ಕಲ್ಪಿಸುವ ಹಕ್ಕಿನ ಕುರಿತಾದ ಅರ್ಜಿಯ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ಪೀಠ ಈ ರೀತಿ ಅಭಿಪ್ರಾಯಪಟ್ಟಿದೆ.

ನವದೆಹಲಿ: ಚುನಾವಣೆಗೆ ಮುನ್ನ ರಾಜಕೀಯ ಪಕ್ಷಗಳು ‘ಉಚಿತ’ ಕೊಡುಗೆಗಳನ್ನು ನೀಡುವ ಭರವಸೆ ನೀಡುತ್ತಿರುವುದಕ್ಕೆ ಅಸಮ್ಮತಿ ಸೂಚಿಸಿದ ಸುಪ್ರೀಂ ಕೋರ್ಟ್ ಬುಧವಾರ, ರಾಷ್ಟ್ರದ ಅಭಿವೃದ್ಧಿಗಾಗಿ ಜನರನ್ನು ಮುಖ್ಯವಾಹಿನಿಗೆ ಕರೆತರುವ ಬದಲು ‘ನಾವು ಪರಾವಲಂಬಿಗಳ ವರ್ಗವನ್ನು ಸೃಷ್ಟಿಸುತ್ತಿಲ್ಲವೇ’ ಎಂದು ಪ್ರಶ್ನಿಸಿದೆ.

ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ಪೀಠವು, ಜನರನ್ನು ಸಮಾಜದ ಮುಖ್ಯವಾಹಿನಿಯ ಭಾಗವಾಗಿ ಮಾಡುವುದು ಮತ್ತು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ಅವಕಾಶ ನೀಡುವುದು ಉತ್ತಮ ಎಂದು ಹೇಳಿದರು.

'ಸಮಾಜದ ಮುಖ್ಯವಾಹಿನಿಯ ಭಾಗವನ್ನಾಗಿ ಮಾಡಿ, ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ಅವರನ್ನು ಉತ್ತೇಜಿಸುವ ಬದಲು, ನಾವು ಪರಾವಲಂಬಿಗಳ ವರ್ಗವನ್ನು ಸೃಷ್ಟಿಸುತ್ತಿಲ್ಲವೇ? ದುರದೃಷ್ಟವಶಾತ್, ಚುನಾವಣೆಯ ಹಿನ್ನೆಲೆಯಲ್ಲಿ ಘೋಷಿಸಲಾದ 'ಲಡ್ಕಿ ಬಹಿನ್' ಮತ್ತು ಇತರ ಯೋಜನೆಗಳಂತಹ ಈ ಉಚಿತ ಕೊಡುಗೆಗಳಿಂದಾಗಿ ಜನರು ಕೆಲಸ ಮಾಡಲು ಸಿದ್ಧರಿಲ್ಲ' ಎಂದು ನ್ಯಾಯಮೂರ್ತಿ ಗವಾಯಿ ಹೇಳಿದರು.

ನಗರ ಪ್ರದೇಶಗಳಲ್ಲಿನ ನಿರಾಶ್ರಿತರಿಗೆ ಆಶ್ರಯ ಕಲ್ಪಿಸುವ ಹಕ್ಕಿಗೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಜನರು ಕೆಲಸ ಮಾಡದೆಯೇ ಉಚಿತ ಪಡಿತರ ಮತ್ತು ಹಣವನ್ನು ಪಡೆಯುತ್ತಾರೆ. ಅವರ ಬಗ್ಗೆ ನಿಮ್ಮ ಕಾಳಜಿ ನಮಗೆ ಅರ್ಥವಾಗುತ್ತದೆ ಮತ್ತು ನಾವು ಅದನ್ನು ಪ್ರಶಂಸಿಸುತ್ತೇವೆ. ಆದರೆ, ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವುದು ಮತ್ತು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಲು ಅವಕಾಶ ನೀಡುವುದು ಉತ್ತಮವಲ್ಲವೇ?' ಎಂದು ಪೀಠ ಕೇಳಿತು.

ಅರ್ಜಿದಾರರೊಬ್ಬರ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್, 'ಕೆಲಸವಿದ್ದರೆ ಕೆಲಸ ಮಾಡಲು ಇಷ್ಟಪಡದವರು ದೇಶದಲ್ಲಿ ಯಾರೂ ಇಲ್ಲ' ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, 'ನೀವು ಕೇವಲ ಒಂದು ಕಡೆಯ ಜ್ಞಾನವನ್ನು ಹೊಂದಿರುವಿರಿ. ನಾನು ಕೃಷಿ ಕುಟುಂಬದಿಂದ ಬಂದಿದ್ದೇನೆ. ಮಹಾರಾಷ್ಟ್ರದಲ್ಲಿ ಚುನಾವಣೆಗೆ ಮುನ್ನ ಅವರು ಘೋಷಿಸಿದ ಉಚಿತ ಕೊಡುಗೆಗಳಿಂದಾಗಿ, ಕೃಷಿಕರಿಗೆ ಕಾರ್ಮಿಕರು ಸಿಗುತ್ತಿಲ್ಲ. ಆದರೆ, ನ್ಯಾಯಾಲಯ ಈ ವಿಚಾರದ ಚರ್ಚೆಯನ್ನು ಬಯಸುವುದಿಲ್ಲ' ಎಂದರು.

ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಸೇರಿದಂತೆ ಎಲ್ಲರೂ ನಿರಾಶ್ರಿತರಿಗೆ ಆಶ್ರಯ ಕಲ್ಪಿಸುವ ಬಗ್ಗೆ ಒಂದೇ ರೀತಿಯ ಗಮನ ಹರಿಸಿದ್ದಾರೆ. ಆದರೆ ಅದೇ ಸಮಯದಲ್ಲಿ, ಅದನ್ನು ಸಮತೋಲನಗೊಳಿಸು ಸಾಧ್ಯವಿಲ್ಲವೇ? ಎಂದು ಪೀಠ ಕೇಳಿತು.

ನಗರ ಪ್ರದೇಶದ ವಸತಿ ರಹಿತರಿಗೆ ಸೂರು ಕಲ್ಪಿಸುವುದು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ನಗರ ಬಡತನ ನಿರ್ಮೂಲನಾ ಮಿಷನ್ ಅನ್ನು ಕೇಂದ್ರ ಸರ್ಕಾರವು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದೆ ಎಂದು ಅಟಾರ್ನಿ ಜನರಲ್ ವೆಂಕಟರಮಣಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ನಗರ ಬಡತನ ನಿರ್ಮೂಲನೆ ಅಭಿಯಾನದ ಅನುಷ್ಠಾನವು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಪರಿಶೀಲಿಸುವಂತೆ ಮತ್ತು ಅದರಲ್ಲಿ ಒಳಗೊಂಡಿರುವ ಅಂಶಗಳನ್ನು ದಾಖಲೆಯಲ್ಲಿ ನೀಡುವಂತೆ ಕೇಂದ್ರಕ್ಕೆ ಸೂಚಿಸಿತು. ಮುಂದಿನ ವಿಚಾರಣೆಯನ್ನು ಆರು ವಾರ ಮುಂದೂಡಿತು.

ಅಟಾರ್ನಿ ಜನರಲ್ ಹೇಳಿದ ಯೋಜನೆಯ ಅನುಷ್ಠಾನಗೊಳ್ಳುವವರೆಗೆ, ಕೇಂದ್ರ ಸರ್ಕಾರ ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್‌ನೊಂದಿಗೆ ಮುಂದುವರಿಯುತ್ತದೆ ಎಂಬುದನ್ನು ಸ್ಪಷ್ಟಪಡಿಸುವಂತೆ ನ್ಯಾಯಾಲಯ ಸೂಚಿಸಿತು.

ಪ್ಯಾನ್-ಇಂಡಿಯಾ ಆಧಾರದ ಮೇಲೆ ಸಮಸ್ಯೆಯನ್ನು ಪರಿಗಣಿಸಲು ಎಲ್ಲ ರಾಜ್ಯಗಳಿಂದ ಮಾಹಿತಿ ಸಂಗ್ರಹಿಸಲು ಪೀಠವು ಕೇಂದ್ರವನ್ನು ಕೇಳಿದೆ.

ವಿಚಾರಣೆಯ ಸಂದರ್ಭದಲ್ಲಿ ಅರ್ಜಿದಾರರೊಬ್ಬರು, ವಸತಿ ರಹಿತರ ಸಮಸ್ಯೆಗೆ ಸಾಕಷ್ಟು ಗಮನ ಅಥವಾ ಪ್ರಾಮುಖ್ಯತೆ ನೀಡದಿರುವುದು ದುರದೃಷ್ಟಕರ. ಅಧಿಕಾರಿಗಳು ಶ್ರೀಮಂತರ ಬಗ್ಗೆ ಮಾತ್ರ ಕರುಣೆ ತೋರಿಸುತ್ತಾರೆ, ಬಡವರ ಬಗ್ಗೆ ಅಲ್ಲ ಎಂದು ಅವರು ಹೇಳಿದಾಗ ಪೀಠವು ಕೆರಳಿತು.

'ಈ ನ್ಯಾಯಾಲಯದಲ್ಲಿ ರಾಮಲೀಲಾ ಮೈದಾನದಲ್ಲಿ ಭಾಷಣ ಮಾಡಿದಂತೆ ಮಾಡಬೇಡಿ ಮತ್ತು ಅನಗತ್ಯ ಆರೋಪಗಳನ್ನು ಮಾಡಬೇಡಿ. ಇಲ್ಲಿ ರಾಜಕೀಯ ಭಾಷಣ ಮಾಡಬೇಡಿ. ನಮ್ಮ ನ್ಯಾಯಾಲಯದ ಕೊಠಡಿಗಳನ್ನು ರಾಜಕೀಯ ಕದನ ಕಣವಾಗಿ ಪರಿವರ್ತಿಸಲು ನಾವು ಅನುಮತಿ ನೀಡುವುದಿಲ್ಲ' ಎಂದು ನ್ಯಾಯಮೂರ್ತಿ ಗವಾಯಿ ಹೇಳಿದರು.

ನ್ಯಾಯಾಧೀಶರು, 'ಶ್ರೀಮಂತರಿಗೆ ಮಾತ್ರ ಕರುಣೆ ತೋರಿಸಲಾಗುತ್ತಿದೆ ಎಂದು ನೀವು ಹೇಗೆ ಹೇಳುತ್ತೀರಿ? ಸರ್ಕಾರಕ್ಕೂ ನೀವು ಇದನ್ನು ಹೇಗೆ ಹೇಳುತ್ತೀರಿ? ಸರ್ಕಾರವು ಏನನ್ನೂ ಮಾಡಿಲ್ಲ ಅಥವಾ ಬಡವರ ಬಗ್ಗೆ ಕಾಳಜಿ ತೋರಿಸಿಲ್ಲ ಎಂದು ಚಿತ್ರಿಸುವುದು ಉತ್ತಮ ಅಭಿರುಚಿಯಲ್ಲ' ಎಂದು ಹೇಳಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT