ನೋಯ್ಡಾ: ನಾಯಿಯನ್ನು ಲಿಫ್ಟ್ ಒಳಗೆ ತರಬೇಡಿ ಎಂದು ಕೇಳಿದ ಪುಟ್ಟ ಬಾಲಕನನ್ನು ಮಹಿಳೆಯೊಬ್ಬರು ಥಳಿಸಿ ಬಲವಂತವಾಗಿ ಲಿಫ್ಟ್ ನಿಂದ ಹೊರಗೆ ದಬ್ಬಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಗ್ರೇಟರ್ ನೋಯ್ಡಾದ ಗೌರ್ ಸಿಟಿ 2 ಅಪಾರ್ಟ್‌ಮೆಂಟ್ ಸಂಕೀರ್ಣದಲ್ಲಿ ಈ ಘಟನೆ ನಡೆದಿದ್ದು, ಇಡೀ ದೃಶ್ಯ ಲಿಫ್ಟ್ ನಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ದಾಖಲಾಗಿದೆ.
ವಿಡಿಯೋದಲ್ಲಿರುವಂತೆ ಟ್ಯೂಷನ್ ನಿಂದ ಹಿಂದಿರುಗಿದ ಎಂಟು ವರ್ಷದ ಬಾಲಕ ಲಿಫ್ಟ್ ನಲ್ಲಿ ತನ್ನ ಮನೆಗೆ ತೆರಳುತ್ತಿದ್ದ. ಈ ವೇಳೆ ಒಂದು ಮಹಡಿಯಲ್ಲಿ ಬಾಗಿಲು ತೆರೆದಿದ್ದು, ಈ ವೇಳೆ ಮಹಿಳೆಯೊಬ್ಬರು ಸಾಕು ನಾಯಿ ಸಹಿತ ಲಿಫ್ಟ್ ಗೆ ಪ್ರವೇಶ ಮಾಡುತ್ತಾರೆ. ಆಕೆಯ ಬಳಿ ನಾಯಿ ಇರುವುದನ್ನು ಕಂಡು ಬೆದರಿದ ಬಾಲಕ ನಾಯಿ ಕಚ್ಚುತ್ತದೆ. ನನಗೆ ನಾಯಿ ಎಂದರೆ ಭಯ.. ದಯವಿಟ್ಟು ನಾಯಿಯನ್ನು ಒಳಗೆ ತರಬೇಡಿ ಎಂದು ಕೈ ಮುಗಿದು ಕೇಳುತ್ತಾನೆ. ಆದರೆ ಬಾಲಕನ ಮಾತು ಕೇಳದ ಮಹಿಳೆ ಆತನನ್ನೇ ನಿಂದಿಸಿ ಆತನನ್ನು ಬಲವಂತವಾಗಿ ಲಿಫ್ಟ್ ನಿಂದ ಹೊರೆಗಳೆದು ತಳಿಸಿ ಕಳುಹಿಸುತ್ತಾರೆ.
ಪುಟ್ಟಬಾಲಕ ಎಂದೂ ಕೂಡ ನೋಡದೆ ಹಲವು ಬಾರಿ ಕಪಾಳಕ್ಕೆ ಬಾರಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಕೆಲವು ಸೆಕೆಂಡುಗಳ ನಂತರ, ಲಿಫ್ಟ್ ಬಾಗಿಲು ತೆರೆಯುತ್ತಿದ್ದಂತೆಯೇ ಹುಡುಗ ಓಡಿ ತನ್ನ ಮನೆಯವರಿಗೆ ವಿಷಯ ತಿಳಿಸುತ್ತಾನೆ. ವಿಚಾರ ತಿಳಿದ ಸ್ಥಳೀಯರು ಮಹಿಳೆಯ ದೂರ್ತ ವರ್ತನೆ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಈ ಸಂಬಂಧ ಪೊಲೀಸ್ ದೂರು ದಾಖಲಿಸಿದ್ದು, ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಕೇಂದ್ರ ನೋಯ್ಡಾದ ಹಿರಿಯ ಪೊಲೀಸ್ ಅಧಿಕಾರಿ ಶಕ್ತಿ ಮೋಹನ್ ಅವಸ್ಥಿ ವರದಿಗಾರರಿಗೆ ತಿಳಿಸಿದ್ದಾರೆ.
''ನಾಯಿ'' ಜಗಳ ಮೊದಲೇನಲ್ಲ..
ಇನ್ನು ಈ ಆಪಾರ್ಟ್ ಮೆಂಟ್ ಈ ಮಹಿಳೆಯ ಜಗಳ ಇದೇ ಮೊದಲೇನಲ್ಲ.. ಈ ಹಿಂದೆ ಸಾಕಷ್ಟು ಬಾರಿ ನಾಯಿ ವಿಚಾರವಾಗಿಯೇ ಸಹ ನಿವಾಸಗಳೊಂದಿಗೆ ಜಗಳ ಮಾಡಿದ್ದಾರೆ. ಇದು ಮಾತ್ರವಲ್ಲದೆ ಇತ್ತೀಚಿನ ದಿನಗಳಲ್ಲಿ ನೋಯ್ಡಾ ಮತ್ತು ಗ್ರೇಟರ್‌ನಲ್ಲಿರುವ ಗೇಟೆಡ್ ಅಪಾರ್ಟ್‌ಮೆಂಟ್ ಸಂಕೀರ್ಣಗಳಿಂದ ಸಾಕು ನಾಯಿಗಳ ಮಾಲೀಕರು ಇತರ ನಿವಾಸಿಗಳೊಂದಿಗೆ ಜಗಳವಾಡುವ ಡಜನ್ಗಟ್ಟಲೆ ಪ್ರಕರಣಗಳು ವರದಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.