ಮುಂಬೈ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಮಠವೊಂದರ 75 ವರ್ಷದ ಮಠಾಧೀಶ ಮತ್ತು ಆತನ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಗುರುವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
17 ವರ್ಷದ ಸಂತ್ರಸ್ತೆಯ ಸಂಬಂಧಿ ಮಹಿಳೆಯನ್ನೂ ಬಂಧಿಸಲಾಗಿದೆ ಎಂದು ಅವರು ಹೇಳಿದರು.
ಬಾಲಕಿ ತನ್ನ ಪೋಷಕರೊಂದಿಗೆ ಮಂಗಳವಾರ ಸಂಜೆ ಅಮರಾವತಿಯ ಶಿರ್ಖೇಡ್ ಪೊಲೀಸ್ ಠಾಣೆಗೆ ಬಂದು ರಿದ್ದಾಪುರ ಮಠದ ಮಠಾದೀಶ ಮತ್ತು ಇತರರ ವಿರುದ್ಧ ದೂರು ನೀಡಿದ್ದಾಳೆ. ವೈದ್ಯಕೀಯ ಪರೀಕ್ಷೆಯಲ್ಲಿ ಬಾಲಕಿ ಎಂಟು ತಿಂಗಳ ಗರ್ಭಿಣಿ ಎಂಬುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರುದಾರರ ಪ್ರಕಾರ, ಬಾಲಕಿ ತನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮನೊಂದಿಗೆ ಕಳೆದ ಒಂದು ವರ್ಷದಿಂದ ಸೇವೆಗಾಗಿ ಮಠದಲ್ಲಿಯೇ ತಂಗಿದ್ದಳು. ಈ ವೇಳೆ, ತನ್ನನ್ನು ಭೇಟಿಯಾಗಲು ಬಾಲಕಿಯನ್ನು ಕಳುಹಿಸುವಂತೆ 2024ರ ಏಪ್ರಿಲ್ 2 ರಂದು ಮಠಾಧೀಶರು ಸಂತ್ರಸ್ತೆಯ ಚಿಕ್ಕಮ್ಮನಿಗೆ ಕೇಳಿದ್ದಾರೆ.
ಆಕೆಯ ಚಿಕ್ಕಮ್ಮ ಬಾಲಕಿಯನ್ನು ಮಠಾಧೀಶರಾದ ಸುರೇಂದ್ರಮುನಿ ತಾಳೇಗಾಂವ್ಕರ್ ಅವರ ಕೋಣೆಗೆ ಕಳುಹಿಸಿದ್ದಾರೆ. ಅಲ್ಲಿ ಅವರು ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮಠದಲ್ಲೇ ಇರುವ ಬಾಳಾಸಾಹೇಬ್ ದೇಸಾಯಿ (40) ಎಂಬಾತನೂ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆರೋಪಿಗಳಿಬ್ಬರೂ ಹಲವು ತಿಂಗಳು ಬಾಲಕಿ ಮೇಲೆ ಕೃತ್ಯ ಎಸಗಿದ್ದಾರೆ. ಸಂತ್ರಸ್ತೆ ಆರಂಭದಲ್ಲಿ ತನ್ನ ಚಿಕ್ಕಮ್ಮನಿಗೆ ಈ ವಿಚಾರ ತಿಳಿಸಿದ್ದಾಳೆ. ಆದರೆ, ಆಕೆ ಸುಮ್ಮನಿರುವಂತೆ ಬಾಲಕಿಗೆ ಬೆದರಿಸಿದ್ದಾಳೆ. ಇದರಿಂದಾಗಿ ಆರೋಪಿಗಳಿಬ್ಬರೂ ಸಂತ್ರಸ್ತೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಮೂವರು ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ 376 (ಅತ್ಯಾಚಾರ), 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು) ಮತ್ತು 506 (ಅಪರಾಧ ಬೆದರಿಕೆ) ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.