ರೋಹ್ತಾಸ್: ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ ಶುಕ್ರವಾರ ಎರಡು ವಿದ್ಯಾರ್ಥಿ ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಒಬ್ಬ ಅಪ್ರಾಪ್ತ ಬಾಲಕ ಗುಂಡೇಟಿನಿಂದ ಸಾವನ್ನಪ್ಪಿದ್ದಾನೆ ಮತ್ತು ಇನ್ನೊಬ್ಬನಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ 10ನೇ ತರಗತಿಯ ವಿದ್ಯಾರ್ಥಿ ಅಮಿತ್ ಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಮತ್ತು ಗುಂಡು ಹಾರಿಸಿದ ಆತನ ಕ್ಲಾಸ್‌ಮೆಟ್ ನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರೌಶನ್ ಕುಮಾರ್ ಹೇಳಿದ್ದಾರೆ.
"ಗುರುವಾರ ಸಸಾರಾಮ್‌ನ ಪರೀಕ್ಷಾ ಕೇಂದ್ರದೊಳಗೆ ವಿದ್ಯಾರ್ಥಿಗಳ ಎರಡು ಗುಂಪಿನ ನಡುವೆ ವಾಗ್ವಾದ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅಮಿತ್ ಮತ್ತು ಇನ್ನೊಬ್ಬ ವಿದ್ಯಾರ್ಥಿ ಸಂಜಿತ್ ಕುಮಾರ್ ಆಟೋರಿಕ್ಷಾದಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ, ಅವರ ಕ್ಲಾಸ್ ಮೆಟ್ ಒಬ್ಬ ಅವರನ್ನು ತಡೆದು ಅವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ" ಎಂದು ಕುಮಾರ್ ತಿಳಿಸಿದ್ದಾರೆ.
ತಕ್ಷಣ ಪೊಲೀಸ್ ತಂಡ ಸ್ಥಳಕ್ಕೆ ತೆರಳಿ ವಿದ್ಯಾರ್ಥಿಗಳನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಚಿಕಿತ್ಸೆಯ ಸಮಯದಲ್ಲಿ ಅಮಿತ್ ಸಾವನ್ನಪ್ಪಿದ್ದು, ಮತ್ತೊಬ್ಬ ವಿದ್ಯಾರ್ಥಿ ಸಜ್ನಿತ್ ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ತನ್ನ ಸಹಪಾಠಿಗಳ ಮೇಲೆ ಗುಂಡು ಹಾರಿಸಿದ ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.