ಮುಂಬೈ: ಓಪನ್ ಸೋರ್ಸ್ ಎನ್‌ಸೈಕ್ಲೋಪೀಡಿಯಾದಿಂದ ಛತ್ರಪತಿ ಸಂಭಾಜಿ ಮಹಾರಾಜ್ ಕುರಿತಾದ ಆಕ್ಷೇಪಾರ್ಹ ವಿಷಯವನ್ನು ತೆಗೆದುಹಾಕದ ಕಾರಣಕ್ಕಾಗಿ ಮಹಾರಾಷ್ಟ್ರ ಸೈಬರ್ ಸೆಲ್ ವಿಕಿಪೀಡಿಯಾದ ಕನಿಷ್ಠ ನಾಲ್ವರು ಸಂಪಾದಕರ ವಿರುದ್ಧ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ತನಿಖಾ ಏಜೆನ್ಸಿಯು ಕ್ಯಾಲಿಫೋರ್ನಿಯಾ ಮೂಲದ ವಿಕಿಮೀಡಿಯಾ ಫೌಂಡೇಶನ್‌ಗೆ ನೋಟಿಸ್ ಕಳುಹಿಸಿದ್ದು, ವಿಕಿಪೀಡಿಯಾದಿಂದ ಆಕ್ಷೇಪಾರ್ಹ ವಿಚಾರವನ್ನು ತೆಗೆದುಹಾಕುವಂತೆ ಮನವಿ ಮಾಡಿದೆ.
ವಿಕಿಮೀಡಿಯಾ ಫೌಂಡೇಶನ್ ವಿಕಿಪೀಡಿಯಾವನ್ನು ನಡೆಸುವ ಲಾಭರಹಿತ ಸಂಸ್ಥೆಯಾಗಿದೆ.
ವಿಕಿಪೀಡಿಯಾದಲ್ಲಿನ ವಿಚಾರವು ತಪ್ಪಾಗಿದೆ ಮತ್ತು ಮರಾಠ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಸಂಭಾಜಿ ಮಹಾರಾಜರನ್ನು ಭಾರತದಲ್ಲಿ ಪೂಜ್ಯ ಭಾವನೆಯಿಂದ ಕಾಣಲಾಗುತ್ತದೆ. ಹೀಗಾಗಿ ಅವರ ಕುರಿತಾದ ಆಕ್ಷೇಪಾರ್ಹ ವಿಚಾರಗಳು ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಗೆ ತೊಡಕಾಗಬಹುದು ಎಂದು ಮಹಾರಾಷ್ಟ್ರ ಸೈಬರ್ ಸಂಸ್ಥೆ ನೋಟಿಸ್‌ನಲ್ಲಿ ಉಲ್ಲೇಖಿಸಿದೆ.
ವಿಕಿಪೀಡಿಯಾದಲ್ಲಿ ಪೋಸ್ಟ್ ಮಾಡಲಾದ ಮಾಹಿತಿಯು ಸಂಭಾಜಿ ಅವರ ಅನುಯಾಯಿಗಳಲ್ಲಿ ಅಶಾಂತಿಗೆ ಕಾರಣವಾಗಬಹುದು ಎಂದು ನೋಟಿಸ್ ಉಲ್ಲೇಖಿಸಿದೆ.
ಆದರೆ, ಈ ವಿಷಯವನ್ನು ತೆಗೆದುಹಾಕುವ ಬಗ್ಗೆ ವಿಕಿಮೀಡಿಯಾದಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗದ ಕಾರಣ ಮಹಾರಾಷ್ಟ್ರ ಸೈಬರ್ ಸೆಲ್ ವಿಕಿಪೀಡಿಯಾದ ಕನಿಷ್ಠ ನಾಲ್ವರು ಸಂಪಾದಕರ ವಿರುದ್ಧ ಐಟಿ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದೆ ಎಂದು ಅವರು ಹೇಳಿದರು.
ಇತ್ತೀಚೆಗೆ ಬಿಡುಗಡೆಯಾದ ಸಂಭಾಜಿ ಮಹಾರಾಜರ ಜೀವನಾಧಾರಿತ ಹಿಂದಿ ಚಲನಚಿತ್ರ ಛಾವಾ ಹಿನ್ನೆಲೆಯಲ್ಲಿ ಈ ಆಕ್ಷೇಪಣೆಗಳು ಬಂದಿವೆ.