ಚಂಡೀಗಢ: ಪಂಜಾಬ್ ಕ್ಯಾಬಿನೆಟ್ ಸಚಿವ ಕುಲದೀಪ್ ಸಿಂಗ್ ಧಲಿವಾಲ್ ಅವರು ಕಳೆದ 21 ತಿಂಗಳುಗಳಿಂದ ನಿರ್ವಹಿಸುತ್ತಿದ್ದ ಆಡಳಿತ ಸುಧಾರಣಾ ಇಲಾಖೆ ಅಸ್ತಿತ್ವದಲ್ಲೇ ಇಲ್ಲ ಎಂಬ ಮಾಹಿತಿ ಈಗ ಬಹಿರಂಗವಾಗಿದೆ.
ಈ ವರೆಗೂ ಧಲಿವಾಲ್, ಎನ್‌ಆರ್‌ಐ ವ್ಯವಹಾರಗಳ ಖಾತೆ ಜೊತೆಗೆ ಆಡಳಿತ ಸುಧಾರಣಾ ಇಲಾಖೆಯನ್ನೂ ನೀಡಲಾಗಿತ್ತು. ಆದರೆ ಆಡಳಿತ ಸುಧಾರಣಾ ಇಲಾಖೆ ಅಸ್ತಿತ್ವದಲ್ಲಿಲ್ಲದ ಕಾರಣ ಅವರಿಗೆ ಎನ್‌ಆರ್‌ಐ ವ್ಯವಹಾರಗಳ ಖಾತೆ ಮಾತ್ರ ಉಳಿದಿದೆ ಎಂದು ಸರ್ಕಾರಿ ಅಧಿಸೂಚನೆಯಲ್ಲಿ ಈಗ ತಿಳಿಸಲಾಗಿದೆ.
ಆಡಳಿತ ಸುಧಾರಣಾ ಇಲಾಖೆಗೆ ಸಚಿವರಿಗೆ ಯಾವುದೇ ಸಿಬ್ಬಂದಿಯನ್ನು ನೀಡಲಾಗಿಲ್ಲ ಮತ್ತು ಅದಕ್ಕೆ ಸಂಬಂಧಿಸಿದ ಯಾವುದೇ ಸಭೆಯನ್ನು ನಡೆಸಲಾಗಿಲ್ಲ ಎಂದು ಮೂಲಗಳು ತಿಳಿಸಿವೆ. ವಿರೋಧ ಪಕ್ಷ ಭಾರತೀಯ ಜನತಾ ಪಕ್ಷದ ನಾಯಕರು ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇದು ರಾಜ್ಯದಲ್ಲಿ ಭಗವಂತ್ ಮಾನ್ ಅವರ ಸರ್ಕಾರದ ಗಂಭೀರತೆಯನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.
ಶುಕ್ರವಾರ ಹೊರಡಿಸಲಾದ ಸರ್ಕಾರಿ ಅಧಿಸೂಚನೆಯಲ್ಲಿ, 'ಮಂತ್ರಿಗಳ ನಡುವೆ ಖಾತೆಗಳ ಹಂಚಿಕೆಗೆ ಸಂಬಂಧಿಸಿದಂತೆ 23.09.24 ರಂದು ದಿನಾಂಕ 21/1/2022-2 ಕ್ಯಾಬಿನೆಟ್/2230 ರ ಪಂಜಾಬ್ ಸರ್ಕಾರಿ ಅಧಿಸೂಚನೆಯ ಭಾಗಶಃ ಮಾರ್ಪಾಡಿನಲ್ಲಿ, ಈ ಹಿಂದೆ ಕ್ಯಾಬಿನೆಟ್ ಸಚಿವ ಕುಲದೀಪ್ ಸಿಂಗ್ ಧಲಿವಾಲ್ ಅವರಿಗೆ ಹಂಚಿಕೆ ಮಾಡಲಾದ ಆಡಳಿತ ಸುಧಾರಣಾ ಇಲಾಖೆಯು ಪ್ರಸ್ತುತ ಅಸ್ತಿತ್ವದಲ್ಲಿಲ್ಲ' ಎಂದು ಹೇಳಲಾಗಿದೆ.
2023 ರ ಮೇ ತಿಂಗಳಲ್ಲಿ ನಡೆದ ಸಚಿವ ಸಂಪುಟ ಪುನರ್ರಚನೆಯಲ್ಲಿ ಧಲಿವಾಲ್ ಅವರಿಗೆ ಆಡಳಿತ ಖಾತೆಯನ್ನು ನೀಡಲಾಗಿತ್ತು. ಕೃಷಿ ಮತ್ತು ರೈತರ ಕಲ್ಯಾಣ ಖಾತೆಯಿಂದ ಅವರನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಎನ್‌ಆರ್‌ಐ ವ್ಯವಹಾರಗಳ ಖಾತೆಯನ್ನು ಉಳಿಸಿಕೊಂಡಿದ್ದರು. ಕೃಷಿ ಮತ್ತು ರೈತರ ಕಲ್ಯಾಣ ಖಾತೆಯನ್ನು ಗುರ್ಮೀತ್ ಸಿಂಗ್ ಖುಡಿಯನ್ ಅವರಿಗೆ ನೀಡಲಾಗಿತ್ತು.
ಏತನ್ಮಧ್ಯೆ, ವಿರೋಧ ಪಕ್ಷಗಳು ಶನಿವಾರ ಆಮ್ ಆದ್ಮಿ ಪಕ್ಷದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದು ಎಎಪಿ ಸರ್ಕಾರ ಆಡಳಿತದ ಬಗ್ಗೆ ಎಷ್ಟು ಗಂಭೀರವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದೆ.
ಪಂಜಾಬ್ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಭಾಷ್ ಶರ್ಮಾ, "ಅಸ್ತಿತ್ವದಲ್ಲಿಲ್ಲದ ಇಲಾಖೆಯನ್ನು ಹಂಚಿಕೆ ಮಾಡಲಾಗಿದೆ ಎಂಬುದು ಸರ್ಕಾರದ ಮಾನಸಿಕ ದಿವಾಳಿತನವನ್ನು ತೋರಿಸುತ್ತದೆ. ಅದನ್ನು ಹಂಚಿಕೆ ಮಾಡಿದವರಿಗೂ ಅಥವಾ ಇಲಾಖೆಯನ್ನು ಹಂಚಿಕೆ ಮಾಡಿದವರಿಗೂ ಈ ಇಲಾಖೆ ಅಸ್ತಿತ್ವದಲ್ಲಿಲ್ಲ ಎಂಬ ಅಂಶ ತಿಳಿದಿರಲಿಲ್ಲ" ಎಂದು ಟೀಕಿಸಿದ್ದಾರೆ.
ಶಿರೋಮಣಿ ಅಕಾಲಿ ದಳದ ನಾಯಕಿ ಮತ್ತು ಬಟಿಂಡಾ ಸಂಸದೆ ಹರ್ಸಿಮ್ರತ್ ಕೌರ್ ಬಾದಲ್ ಕೂಡ ಎಎಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
'ಇದು ಆಮ್ ಆದ್ಮಿ ಪಕ್ಷದ ಆಡಳಿತ ಶೈಲಿ. ತಾವು ಹೊಂದಿರುವ ಖಾತೆಗಳ ಬಗ್ಗೆ ಅರಿವಿಲ್ಲದ ಸಚಿವರಿಗೆ ಅಸ್ತಿತ್ವದಲ್ಲಿಲ್ಲದ ಇಲಾಖೆಗಳನ್ನು ಹಂಚಿಕೆ ಮಾಡಲಾಗಿದೆ. "ಸಚಿವರಿಗೆ ಆಡಳಿತದಲ್ಲಿ ಯಾವುದೇ ಪಾತ್ರವಿಲ್ಲದ ಕಾರಣ, ಇದೆಲ್ಲವೂ ನಡೆಯುತ್ತಿದೆ. ಸರ್ಕಾರ ದೆಹಲಿಯಿಂದ ರಿಮೋಟ್ ಕಂಟ್ರೋಲ್ ಮೂಲಕ ನಡೆಸಲ್ಪಡುತ್ತಿದೆ" ಎಂದು ಬಾದಲ್ X ನಲ್ಲಿ ಪೋಸ್ಟ್ ಮಾಡಿದ್ದಾರೆ.