ಶಿಲ್ಲಾಂಗ್: ಅಕ್ರಮವಾಗಿ ಭಾರತದೊಳಗೆ ಪ್ರವೇಶಿಸುತ್ತಿದ್ದ ಆರು ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಗಡಿ ಭದ್ರತಾ ಪಡೆ (BSF) ಸಿಬ್ಬಂದಿ ಭಾನುವಾರ ಬಂಧಿಸಿದ್ದಾರೆ. ಅವರಲ್ಲಿ ಕೆಲವರು ಈ ಹಿಂದೆ ಮುಂಬೈನಲ್ಲಿ ಕೆಲಸ ಮಾಡಿದ್ದವರು ಇದ್ದಾರೆ. ಮತ್ತೆ ಉದ್ಯೋಗ ಅರಸಿ ಮುಂಬೈಗೆ ಹೋಗಲು ಬಾಂಗ್ಲಾದೇಶದಿಂದ ಮೇಘಾಲಯಕ್ಕೆ ಗಡಿ ದಾಟಿದ ನಂತರ ಅವರನ್ನು ಬಂಧಿಸಲಾಗಿದೆ.
ಖಚಿತ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಬಿಎಸ್‌ಎಫ್ ಸಿಬ್ಬಂದಿಗಳು ಆರು ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಿದ್ದಾರೆ, ಪಶ್ಚಿಮ ಜೈನ್ತಿಯಾ ಹಿಲ್ಸ್ ಜಿಲ್ಲೆಯಿಂದ ನಾಲ್ವರು ಮತ್ತು ದಕ್ಷಿಣ ಗರೋ ಹಿಲ್ಸ್ ಜಿಲ್ಲೆಯಿಂದ ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರ ಪೈಕಿ ತನ್ನ ಗಂಡನ ವೈದ್ಯಕೀಯ ಚಿಕಿತ್ಸೆಗಾಗಿ ಮುಂಬೈಗೆ ಭೇಟಿ ನೀಡಲು ಯೋಜಿಸಿದ್ದ ಮಹಿಳೆಯೂ ಸೇರಿದ್ದಾರೆ ಎಂದು ಬಿಎಸ್‌ಎಫ್ ವಕ್ತಾರರು ತಿಳಿಸಿದ್ದಾರೆ. ಎಲ್ಲಾ ಆರು ಮಂದಿಯನ್ನು ಆಯಾ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೇಘಾಲಯ ಬಾಂಗ್ಲಾದೇಶದೊಂದಿಗೆ 443 ಕಿಮೀ ಉದ್ದದ ಅಂತರಾಷ್ಟ್ರೀಯ ಗಡಿಯನ್ನು ಹೊಂದಿದೆ. ಅದರಲ್ಲಿ ಶೇ.20 ರಷ್ಟು ಪ್ರದೇಶ ಕಷ್ಟಕರವಾದ ಭೂಪ್ರದೇಶವಾಗಿದ್ದು, ಯಾವುದೇ ಬೇಲಿ ಹಾಕಿಲ್ಲ. ಬಾಂಗ್ಲಾದೇಶದ ಪ್ರಜೆಗಳೆಂದು ಶಂಕಿಸಲಾದ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ಪೂರ್ವ ಜೈನ್ತಿಯಾ ಹಿಲ್ಸ್ ಜಿಲ್ಲೆಯ ಉಮ್ಕಿಯಾಂಗ್ ಗ್ರಾಮದ ಅಂತರಾಷ್ಟ್ರೀಯ ಗಡಿಯ ಬಳಿ ಹಲವಾರು ಮನೆಗಳನ್ನು ಧ್ವಂಸ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಗ್ರಾಮದ ಮುಖಂಡರಿಂದ ಎಫ್‌ಐಆರ್ ದಾಖಲಿಸಲಾಗಿದೆ. ಘಟನೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.