ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಮಂಗಳವಾರ ರಾಜ್ಯದಲ್ಲಿ ಲೋಕಸಭಾ ಕ್ಷೇತ್ರಗಳ ವಿಂಗಡಣೆಯ ಪರಿಣಾಮದ ಕುರಿತು ಚರ್ಚಿಸಲು ಮಾರ್ಚ್ 5 ರಂದು ಸರ್ವಪಕ್ಷ ಸಭೆ ಕರೆದಿದ್ದಾರೆ.
ಒಟ್ಟಾರೆಯಾಗಿ, ಈ ಸಭೆಗೆ 40 ನೋಂದಾಯಿತ ರಾಜಕೀಯ ಪಕ್ಷಗಳನ್ನು ಆಹ್ವಾನಿಸಲಾಗಿದೆ.
ತಮಿಳುನಾಡಿನ ಎಲ್ಲಾ ರಾಜಕೀಯ ಪಕ್ಷಗಳು ಈ ಸಭೆಯಲ್ಲಿ ಭಾಗವಹಿಸಿ ಒಗ್ಗಟ್ಟಿನಿಂದ ಧ್ವನಿ ಎತ್ತುವಂತೆ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.
ಇಂದು ರಾಜ್ಯ ಸಚಿವಾಲಯ ಕಚೇರಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಟಾಲಿನ್, "ತಮಿಳುನಾಡು ಈಗ ತನ್ನ ಹಕ್ಕುಗಳಿಗಾಗಿ ಬೃಹತ್ ಹೋರಾಟ ನಡೆಸುವ ಅಗತ್ಯ ಇದೆ. ಲೋಕಸಭಾ ಕ್ಷೇತ್ರಗಳ ವಿಂಗಡಣೆಯ ಹೆಸರಿನಲ್ಲಿ, ದಕ್ಷಿಣ ರಾಜ್ಯಗಳ ತಲೆಯ ಮೇಲೆ ಕತ್ತಿ ನೇತಾಡುತ್ತಿದೆ" ಎಂದು ಹೇಳಿದರು.
ತಮಿಳುನಾಡು ಎಲ್ಲಾ ಬೆಳವಣಿಗೆಯ ಸೂಚಕಗಳಲ್ಲಿ ಮುಂಚೂಣಿಯಲ್ಲಿದೆ ಮತ್ತು ಈ ವಿಂಗಡಣೆಯಿಂದ ರಾಜ್ಯದ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.
ಪ್ರಸ್ತುತ, ರಾಜ್ಯವು 39 ಸಂಸದರನ್ನು ಹೊಂದಿದೆ ಮತ್ತು 2026 ರಲ್ಲಿ ವಿಂಗಡಣೆಯ ನಂತರ, ಸಂಸದರ ಸಂಖ್ಯೆ 31 ಕ್ಕೆ ಇಳಿಯಬಹುದು. ಇದು ಎಂಟು ಲೋಕಸಭಾ ಕ್ಷೇತ್ರಗಳ ನಷ್ಟಕ್ಕೆ ಕಾರಣವಾಗುತ್ತದೆ ಎಂದರು.
ಮತ್ತಷ್ಟು ವಿವರಿಸಿದ ಸ್ಟಾಲಿನ್, ಜನಸಂಖ್ಯಾ ನಿಯಂತ್ರಣವು ಭಾರತದ ಪ್ರಮುಖ ಗುರಿಗಳಲ್ಲಿ ಒಂದಾಗಿದೆ ಮತ್ತು ತಮಿಳುನಾಡು ಅದರಲ್ಲಿ ದೊಡ್ಡ ಸಾಧನೆ ಮಾಡಿದೆ ಎಂದರು.
"ಹಲವು ದಶಕಗಳಿಂದ, ತಮಿಳುನಾಡು ಜನಸಂಖ್ಯಾ ನಿಯಂತ್ರಣವನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದೆ ಮತ್ತು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವಂತಹ ಕ್ರಮಗಳಿಂದಾಗಿ, ರಾಜ್ಯವು ಅನೇಕ ಸಾಧನೆಗಳನ್ನು ಮಾಡಿದೆ. ನಮ್ಮ ಜನಸಂಖ್ಯೆ ಕಡಿಮೆ ಇರುವುದರಿಂದ(ಇತರ ರಾಜ್ಯಗಳಿಗೆ ಹೋಲಿಸಿದರೆ), ಕ್ಷೇತ್ರ ಪುನರ್ವಿಂಗಡಣೆಯ ನಂತರ ತಮಿಳುನಾಡು ಕಡಿಮೆ ಲೋಕಸಭಾ ಸ್ಥಾನಗಳನ್ನು ಪಡೆಯುತ್ತದೆ" ಎಂದು ಸ್ಟಾಲಿನ್ ಹೇಳಿದರು.
"ದೇಶಾದ್ಯಂತ ಒಟ್ಟು ಸಂಸದರ ಸಂಖ್ಯೆ ಹೆಚ್ಚಾದರೆ ತಮಿಳುನಾಡಿನಲ್ಲಿ ಮಾತ್ರ ಕಡಿಮೆಯಾಗುತ್ತವೆ. ಆದ್ದರಿಂದ, ನಮ್ಮ ರಾಜ್ಯವು ಸಂಸತ್ತಿನಲ್ಲಿ ತನ್ನ ಪ್ರಾತಿನಿಧ್ಯವನ್ನು ಕಳೆದುಕೊಳ್ಳುತ್ತದೆ. ಅಂತಿಮವಾಗಿ, ತಮಿಳುನಾಡಿನ ಧ್ವನಿಯನ್ನು ಹತ್ತಿಕ್ಕಲಾಗುತ್ತದೆ" ಎಂದು ಸ್ಟಾಲಿನ್ ತಿಳಿಸಿದರು.