ಬಾಲಸೋರ್/ನವದೆಹಲಿ: ಶತ್ರುಗಳ ನೌಕಾ ಹಡಗುಗಳನ್ನು ಉಡಾಯಿಸಬಲ್ಲ ಕ್ಷಿಪಣಿ ಪರೀಕ್ಷೆಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮತ್ತು ಭಾರತೀಯ ನೌಕಾಪಡೆಯು ಒಡಿಶಾದ ಚಂಡಿಪುರದಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್) ನಿಂದ ಯಶಸ್ವಿಯಾಗಿ ಪರೀಕ್ಷಿಸಿದೆ. ಅಧಿಕಾರಿಗಳು ಬುಧವಾರ ಈ ಮಾಹಿತಿ ನೀಡಿದ್ದಾರೆ.
ಮಂಗಳವಾರ ನಡೆಸಿದ ಪರೀಕ್ಷೆಯಲ್ಲಿ, ಭಾರತೀಯ ನೌಕಾಪಡೆಯ 'ಸೀ ಕಿಂಗ್ ಹೆಲಿಕಾಪ್ಟರ್' ನಿಂದ ಕ್ಷಿಪಣಿಯನ್ನು ಉಡಾಯಿಸಲಾಯಿತು. ಇದು ನಿರ್ದಿಷ್ಠ ಗುರಿಯನ್ನು ಯಶಸ್ವಿಯಾಗಿ ತಲುಪಿದೆ ಎಂದು ಅವರು ಹೇಳಿದರು.
ಕ್ಷಿಪಣಿಯ ಯಶಸ್ವಿ ಪರೀಕ್ಷೆಗಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಡಿಆರ್‌ಡಿಒ ಮತ್ತು ಭಾರತೀಯ ನೌಕಾಪಡೆಯನ್ನು ಅಭಿನಂದಿಸಿದ್ದಾರೆ. ಈ ಪರೀಕ್ಷೆಗಳು ಕ್ಷಿಪಣಿಯ ಸಾಮರ್ಥ್ಯವನ್ನು ಸಾಬೀತುಪಡಿಸಿವೆ. ಅದು 'ಸಮುದ್ರ-ಸ್ಕಿಮ್ಮಿಂಗ್ ಮೋಡ್' ನಲ್ಲಿ ಗರಿಷ್ಠ ವ್ಯಾಪ್ತಿಯಲ್ಲಿ ಸಣ್ಣ ಹಡಗು ಗುರಿಯ ಮೇಲೆ ನೇರವಾಗಿ ದಾಳಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕ್ಷಿಪಣಿ ಗುರಿಯನ್ನು ತಲುಪಲು ಸ್ಥಳೀಯ 'ಇಮೇಜಿಂಗ್ ಇನ್ಫ್ರಾ-ರೆಡ್ ಸೀಕರ್' ಅನ್ನು ಬಳಸುತ್ತದೆ.
ಹಾರಾಟದ ಸಮಯದಲ್ಲಿ ಮರು-ಗುರಿ ಮಾಡಲು ಚಿತ್ರಗಳನ್ನು ನೇರವಾಗಿ ಪೈಲಟ್‌ಗೆ ಕಳುಹಿಸುವ ಪರೀಕ್ಷೆಯೂ ಯಶಸ್ವಿಯಾಗಿದೆ.