ಅಕ್ರಮ ಗಣಿಗಾರಿಕೆ ಕಾರ್ಯಾಚರಣೆಯ ಪರಿಶೀಲನೆಯ ವೇಳೆ ಶಂಕಿತ ಗಣಿಗಾರಿಕೆ ಮಾಫಿಯಾ ನಡೆಸಿರುವ ದಾಳಿಯಲ್ಲಿ ಇಬ್ಬರು ಹರಿಯಾಣ ರಾಜ್ಯದ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದಾಗ ಸಿಕ್ಕಿಬಿದ್ದಿದ್ದ ಟ್ರ್ಯಾಕ್ಟರ್ ಟ್ರಾಲಿಯನ್ನು ಆರೋಪಿಗಳು ಬಲವಂತವಾಗಿ ಬಿಡುಗಡೆ ಮಾಡಿದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಹರಿಯಾಣ ರಾಜ್ಯದ ಸ್ಟೇಷನ್ ಹೌಸ್ ಆಫೀಸರ್ ಇನ್ಸ್‌ಪೆಕ್ಟರ್ ಸೂರಜ್ಮಲ್ ಅವರು ನೀಡಿದ ದೂರಿನ ಆಧಾರದ ಮೇಲೆ ಫಿರೋಜ್‌ಪುರ ಜಿರ್ಕಾ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ ಮತ್ತು ಇತರ ಕಾನೂನುಗಳ ಅಡಿಯಲ್ಲಿ ಮೂವರು ಆರೋಪಿಗಳು ಮತ್ತು 22 ಅಪರಿಚಿತ ಜನರ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದೆ.
ತಾನು, ಸಹಾಯಕ ಸಬ್ ಇನ್ಸ್‌ಪೆಕ್ಟರ್ ರಾಕೇಶ್ ಮತ್ತು ಚಾಲಕ ರಫೀಕ್ ಅವರು ಫಿರೋಜ್‌ಪುರ ಜಿರ್ಕಾ-ಬೀವನ್ ರಸ್ತೆಗೆ ಅಕ್ರಮ ಗಣಿಗಾರಿಕೆ ಕಾರ್ಯಾಚರಣೆಯನ್ನು ಪರಿಶೀಲಿಸಲು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಸೂರಜ್ಮಲ್ ಹೇಳಿದ್ದಾರೆ.
ಘಾಟಾ ಶಂಶಾಬಾದ್ ಪೊಲೀಸ್ ನಾಕಾ ಹತ್ತಿರ ಬಂದಾಗ, ಸೂರಜ್ಮಲ್ ಅವರು ಕಲ್ಲುಗಳನ್ನು ತುಂಬಿದ ಮೂರು ಟ್ರ್ಯಾಕ್ಟರ್-ಟ್ರಾಲಿಗಳನ್ನು ನಿಲ್ಲಿಸಲು ಪ್ರಯತ್ನಿಸಿದರು ಆದರೆ ವಾಹನಗಳು ನಿಲ್ಲಿಸಲಿಲ್ಲ. "ಅವರು ಟ್ರಾಕ್ಟರ್ ಟ್ರಾಲಿಗಳನ್ನು ಕಾಡಿಗೆ ಓಡಿಸಿದರು ... ಒಬ್ಬ ಟ್ರ್ಯಾಕ್ಟರ್ ಚಾಲಕನು ಹಳ್ಳಿಗೆ ಓಡಿಸಿದ. ಎರಡು ಟ್ರಾಕ್ಟರ್ ಟ್ರಾಲಿಗಳು ನನ್ನ ಮುಂದೆ ಚಲಿಸುತ್ತಿದ್ದವು ಮತ್ತು ಅವುಗಳಲ್ಲಿ ಒಂದು (ಚಾಲಕ) ಟ್ರಾಲಿಯನ್ನು ಖಾಲಿ ಮಾಡಿ ಓಡಿಹೋದನು. ನಂತರ, ನಾನು ಸಹಾಯಕ್ಕಾಗಿ ಫಿರೋಜ್‌ಪುರ ಜಿರ್ಕಾ ಎಸ್‌ಎಚ್‌ಒಗೆ ಕರೆ ಮಾಡಿದೆ ಮತ್ತು ಸ್ವಲ್ಪ ಸಮಯದೊಳಗೆ 20-25 ಜನರು ಬಂದು ನಮ್ಮ ಮೇಲೆ ಕಲ್ಲು ತೂರಾಟ ನಡೆಸಿದರು, ”ಎಂದು ಅವರು ಆರೋಪಿಸಿದ್ದಾರೆ.
ಕಲ್ಲು ತೂರಾಟದಿಂದ ತಾವು ಮತ್ತು ಅವರ ಸಹೋದ್ಯೋಗಿಗಳು ಗಾಯಗೊಂಡಿದ್ದೇವೆ ಮತ್ತು ಅವರು ಬಹಳ ಕಷ್ಟಪ್ಪಟ್ಟು ಪಾರಾಗಿರುವುದಾಗಿ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.
ಈ ಸಮಯದಲ್ಲಿ, ಯಾರೋ ಟ್ರಾಕ್ಟರ್-ಟ್ರಾಲಿಯನ್ನು ನಮ್ಮ ಮೇಲೆ ನುಗ್ಗಿಸಲು ಯತ್ನಿಸಿದರು. ಫಿರೋಜ್‌ಪುರ ಜಿರ್ಕಾ ಎಸ್‌ಎಚ್‌ಒ ಅವರ ಸಿಬ್ಬಂದಿ ಮತ್ತು ಗಣಿಗಾರಿಕೆ ಇಲಾಖೆಯ ತಂಡದೊಂದಿಗೆ ಸ್ವಲ್ಪ ಸಮಯದ ನಂತರ ಬಂದರು ಆದರೆ ಆರೋಪಿಗಳು ಆ ವೇಳೆಗೆ ಪರಾರಿಯಾಗಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದೂರಿನ ಆಧಾರದ ಮೇಲೆ, ಮುಲಿ, ಅರ್ಸಾದ್ ಮತ್ತು ಧೋಲಾ ಮತ್ತು ಇತರ 22 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. "ಆರೋಪಿಗಳನ್ನು ಹಿಡಿಯಲು ನಾವು ದಾಳಿ ನಡೆಸುತ್ತಿದ್ದೇವೆ ಮತ್ತು ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು" ಎಂದು ಫಿರೋಜ್‌ಪುರ ಜಿರ್ಕಾ ಎಸ್‌ಎಚ್‌ಒ ಅಮನ್ ಸಿಂಗ್ ಹೇಳಿದ್ದಾರೆ.