ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯಲಿರುವ ಮಹಾ ಕುಂಭಮೇಳ ಕ್ಷಣಗಣನೆ ಆರಂಭವಾಗಿದ್ದು, ದೇಶದ ಮೂಲೆ ಮೂಲೆಯಿಂದ ಇಲ್ಲಿಗೆ ಕೋಟ್ಯಂತರ ಸಾಧು-ಸಂತರು ಆಗಮಿಸುತ್ತಿದ್ದಾರೆ.
ಈ ಪೈಕಿ ಅಸ್ಸಾಂನ ಕಾಮಾಖ್ಯ ಪೀಠದ ಗಂಗಾಪುರಿ ಮಹಾರಾಜ್ ಮಹಾ ಕುಂಭಮೇಳದ ಪ್ರಮುಖ ಆಕರ್ಷಣೀಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದು, ಇವರು 32 ವರ್ಷಗಳಿಂದ ಸ್ನಾನವನ್ನೇ ಮಾಡಿಲ್ಲವಂತೆ.
ಈ ಬಗ್ಗೆ ಮಾತನಾಡಿರುವ ಅವರು ನನಗೆ ಕಳೆದ 32 ವರ್ಷಗಳಿಂದ ಈಡೇರದ ಆಸೆ ಇದೆ. ಅದು ಈಡೇರುವ ವರೆಗೂ ನಾನು ಗಂಗೆಯಲ್ಲಿ ಸ್ನಾನ ಮಾಡುವುದಿಲ್ಲ. ಇದು ಮಿಲನ್ ಮೇಳ. ಆತ್ಮದಿಂದ ಆತ್ಮಕ್ಕೆ ಸಂಪರ್ಕ ಹೊಂದಿರಬೇಕು ಮತ್ತು ಅದಕ್ಕಾಗಿಯೇ ನಾನು ಇಲ್ಲಿದ್ದೇನೆ ಎಂದಿದ್ದಾರೆ.
ಅಂದಹಾಗೆ ಗಂಗಾಪುರಿ ಮಹಾರಾಜರನ್ನು ಛೋಟು ಬಾಬಾ ಎಂದೂ ಕರೆಯುತ್ತಾರೆ. ಈ ಸಾಧು ಮಹಾರಾಜರು ಕುಬ್ಜರಾಗಿದ್ದು, ಅವರಿಗೆ ಈಗ 57 ವರ್ಷ ವಯಸ್ಸು.. ಅವರ ಎತ್ತರ ಕೇವಲ ಮೂರು ಅಡಿ.. ಅವರ ಎತ್ತರದ ಕಾರಣಕ್ಕೇ ಅವರು ಮಹಾ ಕುಂಭಮೇಳದಲ್ಲಿ ಆಕರ್ಷಣೆಯ ಕೇಂದ್ರವಾಗಿದ್ದಾರೆ. ನಾನು 3 ಅಡಿ 8 ಇಂಚು. ನನಗೆ 57 ವರ್ಷ. ಇಲ್ಲಿಗೆ ಬರಲು ನನಗೆ ತುಂಬಾ ಸಂತೋಷವಾಗಿದೆ. ನೀವೆಲ್ಲರೂ ಇಲ್ಲಿದ್ದೀರಿ, ನನಗೆ ಅದರಲ್ಲಿ ಸಂತೋಷವಾಗಿದೆ.. ಭಗವಂತ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಅವರು ಹೇಳಿದ್ದಾರೆ.
12 ವರ್ಷಗಳ ನಂತರ ಮಹಾಕುಂಭಮೇಳವನ್ನು ಆಚರಿಸಲಾಗುತ್ತಿದ್ದು, ಜನವರಿ 13 ರಿಂದ ಫೆಬ್ರವರಿ 26 ರವರೆಗೆ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಮಹಾ ಕುಂಭಮೇಳದಲ್ಲಿ ಅಪಾರ ಭಕ್ತರು ಸೇರುವ ನಿರೀಕ್ಷೆಯಿದೆ. ಇನ್ನು ಮಹಾ ಕುಂಭಮೇಳಕ್ಕೆ ಸಕಲ ಸಿದ್ಧತೆಗಳನ್ನು ನಡೆಸಿರುವ ಸರ್ಕಾರ ಕಾಲ್ತುಳಿತ ಅಪಘಾತಗಳನ್ನು ತಡೆಗಟ್ಟಲು, ಭಕ್ತರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾಡಳಿತವು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ, ವಿಶೇಷವಾಗಿ ಜನಸಂದಣಿಯನ್ನು ನಿರ್ವಹಿಸುವುದು ಮತ್ತು ಬೆಂಕಿಯ ಘಟನೆಗಳನ್ನು ತಪ್ಪಿಸಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.