ಬಂಡಿಪೋರಾ: ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಸೇನಾ ವಾಹನ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ವಾರ ಪೊಂಚ್ ಬಳಿ ಸೇನಾ ವಾಹನ ಕಮರಿಗೆ ಬಿದ್ದು ಕರ್ನಾಟಕದ ನಾಲ್ವರು ಸೇರಿದಂತೆ ಒಟ್ಟು ಐವರು ಹುತಾತ್ಮರಾಗಿದ್ದರು.
ಇದು ಮಾಸುವ ಮುನ್ನವೇ ಮತ್ತೆ ಅಂತಹುದೇ ಘಟನೆ ಸಂಭವಿಸಿದ್ದು, ಸೇನಾ ವಾಹನ ಪ್ರಪಾತಕ್ಕೆ ಬಿದ್ದರಿಂದ ಇಬ್ಬರು ಯೋಧರು ಹುತಾತ್ಮರಾಗಿರುವ ಘಟನೆ ಬಂಡಿಪೋರಾ ಜಿಲ್ಲೆಯಲ್ಲಿ ನಡೆದಿದೆ.
ಸೇನಾ ವಾಹನವೊಂದು ರಸ್ತೆಯಿಂದ ಸ್ಕಿಡ್ ಆಗಿ ಉತ್ತರ ಕಾಶ್ಮೀರ ಜಿಲ್ಲೆಯ ಎಸ್‌ಕೆ ಪಾಯೆನ್ ಬಳಿ ಪ್ರಪಾತಕ್ಕೆ ಬಿದ್ದರಿಂದ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ ಇತರ ಮೂವರು ಯೋಧರು ಗಾಯಗೊಂಡಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿದ್ದ ಮೂವರು ಯೋಧರು ಪ್ರಾಣಪಾಯದಿಂದ ಪಾರಾಗಿದ್ದು, ಅವರನ್ನು ಶ್ರೀನಗರಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಮಸ್ರತ್ ಇಕ್ಬಾಲ್ ಸುದ್ದಿಗಾರರಿಗೆ ತಿಳಿಸಿದರು.