ನವದೆಹಲಿ: ಬಿಜೆಪಿ ನಾಯಕ ರಮೇಶ್ ಬಿಧುರಿ ಅವರು ತಮ್ಮ ತಂದೆ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕೆ ಸೋಮವಾರ ದೆಹಲಿ ಮುಖ್ಯಮಂತ್ರಿ ಅತಿಶಿ ಅವರು ಕಣ್ಣೀರು ಹಾಕಿದರು.
ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅತಿಶಿ ಅವರು, ಬಿಜೆಪಿಯ ಕಲ್ಕಾಜಿ ಕ್ಷೇತ್ರದ ಅಭ್ಯರ್ಥಿ ಬಿಧುರಿ ಅವರ ಆಕ್ಷೇಪಾರ್ಹ ಹೇಳಿಕೆಗೆ ತೀವ್ರ ಬೇಸರ ವ್ಯಕ್ತಪಡಿಸಿದರು.
ಈ ವೇಳೆ ತೀವ್ರ ಭಾವುಕರಾಗಿ ಮಾತನಾಡಿದ ಅತಿಶಿ ಅವರು, ನನ್ನ ತಂದೆ ಅವರು ಜೀವನದುದ್ದಕ್ಕೂ ಶಿಕ್ಷಕರಾಗಿದ್ದರು. ಅವರು ಬಡ ಮತ್ತು ಕೆಳ ಮಧ್ಯಮ ವರ್ಗದ ಸಾವಿರಾರು ಮಕ್ಕಳಿಗೆ ಪಾಠ ಮಾಡಿದ್ದಾರೆ. ಅವರಿಗೆ ಈಗ 80 ವರ್ಷ ವಯಸ್ಸಾಗಿದೆ. ಈಗ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಅವರಿಗೆ ಬೇರೊಬ್ಬರ ಸಹಾಯವಿಲ್ಲದೆ ನಡೆಯಲು ಸಹ ಸಾಧ್ಯವಿಲ್ಲ. ಚುನಾವಣೆ ಅಥವಾ ರಾಜಕೀಯದ ಕಾರಣಕ್ಕೆ ಅಂತಹ ವೃದ್ಧರನ್ನು ಗುರಿಯಾಗಿಸಿಕೊಂಡು ಮಾತನಾಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
‘ನಮ್ಮ ರಾಜಕಾರಣ ಇಷ್ಟೊಂದು ಕೆಳಮಟ್ಟಕ್ಕೆ ಇಳಿದಿದ್ದು ಹೇಗೆ?, 10 ವರ್ಷ ಸಂಸದರಾಗಿದ್ದಾಗ ಕಲ್ಕಾಜಿ ಕ್ಷೇತ್ರಕ್ಕೆ ಏನು ಕೆಲಸ ಮಾಡಿದ್ದಾರೆ ಎಂಬುದನ್ನು ಬಿಧುರಿ ತೋರಿಸಬೇಕು. ಅವರು ನನ್ನ ತಂದೆಯನ್ನು ನಿಂದಿಸದೆ ತಮ್ಮ ಕೆಲಸದ ಆಧಾರದ ಮೇಲೆ ಮತ ಕೇಳಬೇಕು’ ಎಂದು ತಿರುಗೇಟು ನೀಡಿದರು.
ನಿನ್ನೆ ರೋಹಿಣಿಯಲ್ಲಿ ನಡೆದ ಬಿಜೆಪಿಯ 'Parivarthan Rally'ಯಲ್ಲಿ ಮಾತನಾಡಿದ ಬಿಧುರಿ, ದೆಹಲಿ ಮುಖ್ಯಮಂತ್ರಿ ಅತಿಶಿ ತಮ್ಮ ತಂದೆಯನ್ನೇ ಬದಲಾಯಿಸಿಕೊಂಡಿದ್ದಾರೆ. ಅತಿಶಿ ತಮ್ಮ ಸರ್ನೇಮ್ ಅನ್ನು "ಮರ್ಲೆನಾ" ನಿಂದ "ಸಿಂಗ್" ಎಂದು ಬದಲಾಯಿಸಿಕೊಂಡಿದ್ದಾರೆ ಎಂದು ವೈಯಕ್ತಿಕ ದಾಳಿ ನಡೆಸಿದ್ದರು.
ಕಲ್ಕಾಜಿ ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕರಾಗಿರುವ ಅತಿಶಿ ಅವರು ಸ್ವಲ್ಪ ಸಮಯದ ಹಿಂದೆ ತಮ್ಮ ಸರ್ನೇಮ್ ಅನ್ನು ಕೈ ಬಿಟ್ಟಿದ್ದಾರೆ.