ಪಾಟ್ನಾ: ರಾಜ್ಯ ರಾಜಧಾನಿಯ ಗಾಂಧಿ ಮೈದಾನದಲ್ಲಿ ಕಾನೂನುಬಾಹಿರವಾಗಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿದ್ದಕ್ಕಾಗಿ ಬಂಧಿತರಾಗಿದ್ದ ಜನ್ ಸೂರಾಜ್ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಕೆಲವೇ ಗಂಟೆಗಳ ನಂತರ ಸೋಮವಾರ ಬೇಷರತ್ ಜಾಮೀನು ನೀಡಲಾಗಿದೆ.
ಬೇಷರತ್ ಜಾಮೀನು ಮಂಜೂರು ಮಾಡಿದ ನಂತರ ಕಿಶೋರ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಶಾಂತ್ ಕಿಶೋರ್ ಅವರು, ನ್ಯಾಯಾಲಯವು ಈ ಹಿಂದೆ 25,000 ರೂಪಾಯಿಗಳ ವೈಯಕ್ತಿಕ ಬಾಂಡ್ ಮೇಲೆ ಜಾಮೀನು ನೀಡಿತ್ತು ಮತ್ತು ಜಾಮೀನು ಬಾಂಡ್‌ನೊಂದಿಗೆ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವ ಪ್ರತಿಭಟನೆಗಳಲ್ಲಿ ಭಾಗವಹಿಸುವಂತಿಲ್ಲ ಎಂಬ ಷರತ್ತು ವಿಧಿಸಿತ್ತು ಎಂದರು.
ಆದರೆ ಪ್ರತಿಭಟಿಸುವುದು ತಮ್ಮ ಮೂಲಭೂತ ಹಕ್ಕು ಎಂದು ವಾದಿಸಿ ಜಾಮೀನು ಬಾಂಡ್ ತುಂಬಲು ನಿರಾಕರಿಸಿದರು ಮತ್ತು ಷರತ್ತುಗಳನ್ನು ತೆಗೆದುಹಾಕುವಂತೆ ನ್ಯಾಯಾಲಯವನ್ನು ಕೋರಿದರು. ಮನವಿ ಪುರಸ್ಕರಿಸಿದ ಕೋರ್ಟ್ ಅವರಿಗೆ ಬೇಷರತ್ ಜಾಮೀನು ನೀಡಿದೆ.
ನನ್ನನ್ನು ಬಂಧಿಸಿದ ನಂತರ ಪೊಲೀಸರು ರಾಜ್ಯ ರಾಜಧಾನಿಯಲ್ಲಿರುವ ಬ್ಯೂರ್ ಮಾದರಿ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದರು ಎಂದು ಕಿಶೋರ್ ಹೇಳಿದ್ದಾರೆ.
ಸರಕಾರದಲ್ಲಿ ಕೆಲ ಅಧಿಕಾರಿಗಳು ಹೀರೋ ಆಗಲು ಯತ್ನಿಸುತ್ತಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇದೆ ಎಂಬುದನ್ನು ನ್ಯಾಯಾಲಯ ತೋರಿಸಿದೆ ಎಂದರು.
ಗಾಂಧಿ ಮೈದಾನದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದು ಕಾನೂನಿಗೆ ವಿರುದ್ಧವಲ್ಲ ಎಂಬ ನಮ್ಮ ನಿಲುವನ್ನು ನ್ಯಾಯಾಲಯದ ಆದೇಶ ಮಾನ್ಯ ಮಾಡಿದೆ. ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸುತ್ತೇನೆ ತಿಳಿಸಿದರು.
ಬಿಹಾರ ಲೋಕಸೇವಾ ಆಯೋಗ(ಬಿಪಿಎಸ್‌ಸಿ) ಇತ್ತೀಚೆಗೆ ನಡೆಸಿದ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಜನ್ ಸೂರಾಜ್ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರು ಗುರುವಾರ ಆಮರಣಾಂತ ಉಪವಾಸ ಆರಂಭಿಸಿದ್ದರು.