ನವದೆಹಲಿ: ಪತ್ನಿಯ ವಿರುದ್ಧ ಕಿರುಕುಳ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದ ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಅವರ 4 ವರ್ಷದ ಮಗುವಿನ ಪಾಲನೆ ವಿಷಯ ಈಗ ಕೋರ್ಟ್ ಮೆಟ್ಟಿಲೇರಿದೆ.
ಅತುಲ್ ಸುಭಾಷ್ ಅವರ ತಾಯಿ ತಮ್ಮ ಮೊಮ್ಮಗುವಿನ ಪಾಲನೆಗೆ ಅವಕಾಶ ಕೋರಿ ಕೋರ್ಟ್ ಮೊರೆ ಹೋಗಿದ್ದರು. ಈ ವಿಷಯವಾಗಿ ಪ್ರತಿವಾದಿಯಾಗಿರುವ ಅತುಲ್ ಸುಭಾಷ್ ಪತ್ನಿ ಸಿಖಿತಾ ಸಿಂಘಾನಿಯಾ ತಮ್ಮ ಪುತ್ರ ಹರ್ಯಾಣದ ಫರೀದಾಬಾದ್ ನ ಬೋರ್ಡಿಂಗ್ ಶಾಲೆಯಲ್ಲಿದ್ದು, ಆತನನ್ನು ತಾಯಿಯೊಂದಿಗೆ ಇರುವುದಕ್ಕಾಗಿ ಬೆಂಗಳೂರಿಗೆ ಕರೆದೊಯ್ಯಲಾಗುತ್ತಿದೆ ಎಂದು ನಿಖಿತಾ ಅವರ ವಕೀಲರು ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದ್ದಾರೆ.
34 ವರ್ಷದ ಅತುಲ್ ಸುಭಾಷ್ ಡಿಸೆಂಬರ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನಿಕಿತಾ ಮತ್ತು ಅವರ ಕುಟುಂಬ ಸದಸ್ಯರು ತನಗೆ ಮತ್ತು ಅವನ ಹೆತ್ತವರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ನಿಕಿತಾ, ಆಕೆಯ ತಾಯಿ ನಿಶಾ ಮತ್ತು ಆಕೆಯ ಸಹೋದರ ಅನುರಾಗ್ ಆತ್ಮಹತ್ಯೆ ಪ್ರಕರಣಕ್ಕೆ ಕುಮ್ಮಕ್ಕು ನೀಡಿರುವ ಆರೋಪ ಎದುರಿಸುತ್ತಿದ್ದು ಬಂಧನದ ಬಳಿಕ ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ.
ಈ ನಡುವೆ ಅತುಲ್ ಅವರ ತಾಯಿ ಅಂಜು ದೇವಿ ಅವರು ಮೊಮ್ಮಗನನ್ನು ಕಸ್ಟಡಿಗೆ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ಇದಕ್ಕೆ ಒಪ್ಪದ ನಿಖಿತಾ ಪರ ವಕೀಲರು ಜಾಮೀನಿನ ಷರತ್ತುಗಳ ಪ್ರಕಾರ ನಿಖಿತಾ ಬೆಂಗಳೂರಿನಲ್ಲಿಯೇ ಇರಬೇಕಾಗಿರುವುದರಿಂದ ಮಗುವನ್ನೂ ಬೆಂಗಳೂರಿಗೆ ಸ್ಥಳಾಂತರಿಸಬೇಕಾಗಿದೆ ಎಂದು ವಾದ ಮಂಡಿಸಿದ್ದಾರೆ.
ವಾದ ಆಲಿಸಿದ ನ್ಯಾ. ಬಿವಿ ನಾಗರತ್ನ ಹಾಗೂ ನ್ಯಾ. ಎನ್ ಕೋಟಿಶ್ವರ್ ಸಿಂಗ್ ಅವರಿದ್ದ ಪೀಠ, ಮಗುವನ್ನು ಮುಂದಿನ ವಿಚಾರಣೆ ವೆಳೆಗೆ ಕೋರ್ಟ್ ಗೆ ಹಾಜರುಪಡಿಸಬೇಕೆಂದು ಸೂಚಿಸಿದೆ.
ಅಂಜುದೇವಿ ಪರ ವಾದ ಮಂಡಿಸಿದ ವಕೀಲರು, ತಮ್ಮ ಕಕ್ಷಿದಾರರು ಮಗುವಿನ ಅಜ್ಜಿಯಾಗಿರುವ ಕಾರಣ ಆಕೆಗೆ ಮಗುವಿನ ಪಾಲನೆಯನ್ನು ಆಕೆಗೆ ವಹಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಆರು ವರ್ಷದೊಳಗಿನ ಮಗುವನ್ನು ವಸತಿ ಶಾಲೆಗೆ ಕಳುಹಿಸಬಾರದು ಎಂದು ವಕೀಲರು ಹೇಳಿದ್ದಾರೆ.
ವಾದ ಆಲಿಸಿದ ನ್ಯಾಯಾಲಯ, ಮಗು ತನ್ನ ಅಜ್ಜಿಯೊಂದಿಗೆ ಹೆಚ್ಚು ಸಮಯ ಕಳೆದ ಉದಾಹರಣೆಗಳಿಲ್ಲ ಎಂಬ ಅಂಶವನ್ನು ಗಮನಿಸಿದ್ದು, "ಮಗು ಅರ್ಜಿದಾರರಿಗೆ ಅಪರಿಚಿತ" ಎಂದು ನ್ಯಾಯಮೂರ್ತಿ ನಾಗರತ್ನ ಹೇಳಿದ್ದಾರೆ. ಮಗುವಿಗೆ ಎರಡು ವರ್ಷದವಳಿದ್ದಾಗ ಅಜ್ಜಿ ಸಂವಾದ ನಡೆಸುತ್ತಿರುವ ಚಿತ್ರಗಳು ತಮ್ಮ ಬಳಿ ಇವೆ ಎಂದು ಅಂಜುದೇವಿ ಪರ ವಕೀಲರು ತಿಳಿಸಿದ್ದಾರೆ. ನಿಕಿತಾ ಸಿಂಘಾನಿಯಾ ಅಪರಾಧಿ ಎಂದು ಇನ್ನೂ ಸಾಬೀತಾಗಿಲ್ಲ ಮತ್ತು "ಮಾಧ್ಯಮ ವಿಚಾರಣೆ" ಆಧರಿಸಿ ವಿಷಯವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಒತ್ತಿ ಹೇಳಿದೆ.
ವಿಚಾರಣೆ ನಡೆಯುತ್ತಿರುವ ಸೂಕ್ತ ನ್ಯಾಯಾಲಯ ಮಗುವಿನ ಪಾಲನೆಯ ವಿಷಯವನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದು ಪೀಠ ಹೇಳಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಜನವರಿ 20 ರಂದು ನಡೆಯಲಿದೆ.