ನವದೆಹಲಿ: ಆಗಸ್ಟ್ 31, 2020 ರಂದು ನಿಧನರಾದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಸ್ಮಾರಕವನ್ನು ರಾಜ್ ಘಾಟ್ ನ 'ರಾಷ್ಟ್ರೀಯ ಸ್ಮೃತಿ'ಯಲ್ಲಿ ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಮಾಜಿ ರಾಷ್ಟ್ರಪತಿಯವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ, ತಮ್ಮ ತಂದೆಗೆ ಗೌರವ ಸಲ್ಲಿಸಿದ್ದಕ್ಕಾಗಿ ಧನ್ಯವಾದ ಅರ್ಪಿಸಿದರು.
"'ರಾಷ್ಟ್ರೀಯ ಸ್ಮೃತಿ' ಸಂಕೀರ್ಣದಲ್ಲಿ(ರಾಜ್‌ಘಾಟ್ ಆವರಣದ ಒಂದು ಭಾಗ) ಮಾಜಿ ರಾಷ್ಟ್ರಪತಿ, ದಿವಂಗತ ಪ್ರಣಬ್ ಮುಖರ್ಜಿ ಅವರ ಸ್ಮಾರಕ ನಿರ್ಮಿಸಲು ಸಕ್ಷಮ ಪ್ರಾಧಿಕಾರವು ಅನುಮೋದನೆ ನೀಡಿದೆ ಎಂದು ಕೇಂದ್ರ ಸರ್ಕಾರ ಶರ್ಮಿಷ್ಠಾ ಅವರಿಗೆ ಪತ್ರ ಬರೆದು ತಿಳಿಸಿದೆ.
ಸ್ಮಾರಕ ನಿರ್ಮಾಣಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವುದನ್ನು ಸ್ವಾಗತಿಸಿದ ಶರ್ಮಿಷ್ಠಾ ಮುಖರ್ಜಿ ಅವರು, ತಮ್ಮ ತಂದೆಯನ್ನು ಗೌರವಿಸಿದ್ದಕ್ಕಾಗಿ ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ್ದಾರೆ.
"ತಂದೆಯವರ ಸ್ಮಾರಕವನ್ನು ರಚಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ನನ್ನ ಹೃದಯದಿಂದ ಧನ್ಯವಾದ ಮತ್ತು ಕೃತಜ್ಞತೆಯನ್ನು ತಿಳಿಸಲು ಪ್ರಧಾನಿ ನರೇಂದ್ರ ಮೋದಿ ಜೀ ಅವರನ್ನು ಭೇಟಿ ಮಾಡಿದೆ. ನಾವು ಅದನ್ನು ಕೇಳಿರಲಿಲ್ಲ. ಸರ್ಕಾರದ ಗೌರವವನ್ನು ಕೇಳಿ ಪಡೆಯಬಾರದು. ಅದು ಒಲಿಯಬೇಕು ಎಂದು ಬಾಬಾ ಸದಾ ಹೇಳುತ್ತಿದ್ದರು. ಈ ಅನಿರೀಕ್ಷಿತ ಬೆಳವಣಿಗೆ ನನ್ನ ಹೃದಯವನ್ನು ತಟ್ಟಿದೆ. ಪ್ರಧಾನಿ ಭೇಟಿ ನಿಜಕ್ಕೂ ಧನ್ಯತಾಭಾವ ಮೂಡಿಸಿದೆ ಎಂದು ಶರ್ಮಿಷ್ಠಾ ಮುಖರ್ಜಿ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.