ತಿರುಪತಿ: 6 ಮಂದಿಯ ಸಾವಿಗೆ ಕಾರಣವಾದ ತಿರುಪತಿ ಕಾಲ್ತುಳಿತ ಪ್ರಕರಣ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿರುವಂತೆಯೇ ಅಲ್ಲಿ ನಡೆದ ಕರಾಳ ಘಟನೆ ಕುರಿತು ಸಂತ್ರಸ್ಥೆಯೊಬ್ಬರು ಮಾಹಿತಿ ನೀಡಿದ್ದಾರೆ.
ಹೌದು.. ಬುಧವಾರ ತಿರುಪತಿಯಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಆರು ಜನರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳು ತಿರುಪತಿಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಮಗಾದ ಕರಾಳ ಅನುಭವವನ್ನು ಸಂತ್ರಸ್ಥರು ತೆರೆದಿಟ್ಟಿದ್ದಾರೆ.
ಈ ಕುರಿತು ಮಾತನಾಡಿರುವ ಡಿ ವೆಂಕಟ ಲಕ್ಷ್ಮಿ ಎಂಬ ಸಂತ್ರಸ್ಥರು, 'ನಾನು ಕಳೆದ 25 ವರ್ಷಗಳಿಂದ ಪವಿತ್ರ ತಿರುಪತಿ ದೇವಸ್ಥಾನಕ್ಕೆ ಬರುತ್ತಿದ್ದೇನೆ. ಎಂದಿಗೂ ಈ ರೀತಿ ಸಂಭವಿಸಿರಲಿಲ್ಲ. ಆದರೆ ನಿನ್ನೆ ನನ್ನ ಜೀವನದ ಅಂತ್ಯ ಎಂದು ಭಾವಿಸಿದ್ದೆ. ಐದು ನಿಮಿಷಗಳಲ್ಲಿ ಎಲ್ಲ ಆಗಿ ಹೋಯಿತು. ಐದು ನಿಮಿಷಗಳಲ್ಲಿ ನಾವು ಸತ್ತೇ ಹೋಗುತ್ತೇವೆ ಎಂದು ಭಾವಿಸಿದ್ದೆ ಎಂದು ಹೇಳಿದ್ದಾರೆ.
ವೈಕುಂಠ ದರ್ಶನ ಟೋಕನ್ ಗಾಗಿ ನಾವು ಸರತಿ ಸಾಲಿನಲ್ಲೇ ನಿಂತಿದ್ದೆವು. ಆದರೆ ದಿಢೀರನೆ ನೂಕು ನುಗ್ಗಲು ಉಂಟಾಯಿತು. ಈ ವೇಳೆ ನಾನು ನಿಯಂತ್ರಣ ತಪ್ಪಿ ಕೆಳಗೆ ಬಿದ್ದೆ. ನನ್ನ ಅಕ್ಕಪಕ್ಕದಲ್ಲಿದ್ದವರೂ ಕೂಡ ಕೆಳಗೆ ಬಿದ್ದರು. ಆ ಕ್ಷಣ ನನ್ನ ಜೀವನದ ಅಂತಿಮ ಕ್ಷಣ ಎಂದು ಭಾವಿಸಿದ್ದೆ. ಆದರೆ ನಾನು ಕೆಳಗೆ ಬೀಳುತ್ತಲೇ ನನ್ನ ಪಕ್ಕದಲ್ಲಿದ್ದ ಪುರುಷರು ನನ್ನನ್ನು ಪಕ್ಕಕ್ಕೆ ಎಳೆದು ತಂದರು.
ಬಳಿಕ ನನಗೆ ಕುಡಿಯಲು ನೀರು ಕೊಟ್ಟರು. ನನ್ನ ಪಕ್ಕದಲ್ಲೇ ಕನಿಷ್ಠ 10 ಮಂದಿ ಪ್ರಜ್ಞೆ ಇಲ್ಲದೆ ಬಿದ್ದಿದ್ದರು. ನಾವೆಲ್ಲರೂ ಬೀಳುತ್ತಿದ್ದೇವೆ ಎಂದು ಕೂಗಿದರೂ ಯಾರಿಗೂ ಕೇಳಿಸದ ಪರಿಸ್ಥಿತಿ ಅದು. ಹಿಂದಿನಿಂದ ಜನರು ನೂಕುತ್ತಿದ್ದರು. ಕೆಳಗೆ ಬಿದ್ದವರ ಮೇಲೆ ಜನ ನಡೆಯುತ್ತಿದ್ದರು. ನನಗೆ ಬಹಳ ಹೊತ್ತು ಉಸಿರಾಡಲು ಸಹ ಸಾಧ್ಯವಾಗಲಿಲ್ಲ, ಪೊಲೀಸರು ಸರಿಯಾದ ಸರತಿ ಸಾಲು ನಿಲ್ಲಿಸಿದ್ದರೆ ಅನಾಹುತ ತಪ್ಪಿಸಬಹುದಿತ್ತು ಎಂದು ಹೇಳಿದ ಅವರು. 'ಜನರಿಗೆ ಏನಾಗುತ್ತಿದೆ ಎಂದು ಅರ್ಥವಾಗುತ್ತಿರಲಿಲ್ಲ ಎಂದು ಹೇಳಿದರು.
ದಿಢೀರ್ ಗೇಟ್ ತೆರೆದಿದ್ದೇ ಅಪಘಾತಕ್ಕೆ ಕಾರಣ
ಇನ್ನು ಮತ್ತೋರ್ವ ಭಕ್ತೆ ಕೂಡ ಇಂತಹುದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, 'ನಾವು ಬೆಳಿಗ್ಗೆ 11 ಗಂಟೆ ಸುಮಾರಿಗೆ ಬಂದಿದ್ದು, ಸಂಜೆ 7 ಗಂಟೆಗೆ ಟೋಕನ್ ಗಾಗಿ ಸರತಿ ಸಾಲಲ್ಲಿ ನಿಂತೆವು. ಒಬ್ಬ ವ್ಯಕ್ತಿ ಭಕ್ತರು ಧಾವಿಸಿ ಸಾಲಿನಲ್ಲಿ ಹೋಗಿ ಎಂದು ಹೇಳಿದರು, ಆದರೆ ಅವರ ಮಾತು ಯಾರು ಕೇಳುತ್ತಾರೆ? ಪೊಲೀಸರು ಒಳಗೆ ಅಲ್ಲ, ಹೊರಗೆ ಇದ್ದರು. ಪೊಲೀಸರು ಇದ್ದಕ್ಕಿದ್ದಂತೆ ಗೇಟ್‌ಗಳನ್ನು ತೆರೆದರು, ಇದು ಕಾಲ್ತುಳಿತಕ್ಕೆ ಕಾರಣವಾಯಿತು ಎಂದು ಅವರು ಹೇಳಿದ್ದಾರೆ.
ಜಗನ್ ಸಂತಾಪ
ಇನ್ನು ಕಾಲ್ತುಳಿತದ ಬಗ್ಗೆ ಆಘಾತ ಮತ್ತು ದುಃಖ ವ್ಯಕ್ತಪಡಿಸಿದ ವೈಎಸ್‌ಆರ್‌ಸಿಪಿ ಮುಖ್ಯಸ್ಥ ಹಾಗೂ ಮಾಜಿ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಜಗನ್, 'ಗಾಯಗೊಂಡವರಿಗೆ ಉತ್ತಮ ವೈದ್ಯಕೀಯ ಆರೈಕೆಯನ್ನು ಖಚಿತಪಡಿಸಿಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಜೀವಹಾನಿ ತೀವ್ರ ದುಃಖಕರ ಎಂದು ಬಣ್ಣಿಸಿದ ಅವರು, ಸ್ಥಳದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ತಕ್ಷಣ ಮತ್ತು ತುರ್ತು ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ಅಂತೆಯೇ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಗೊಂಡ ಭಕ್ತರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ರೆಡ್ಡಿ ಪಕ್ಷದ ಪ್ರಕಟಣೆಯಲ್ಲಿ ಹಾರೈಸಿದರು.
ತಿರುಪತಿಯ ವೆಂಕಟೇಶ್ವರ ಸ್ವಾಮಿ ದೇವಾಲಯದ ಅಧಿಕೃತ ಉಸ್ತುವಾರಿ ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ಕಾಲ್ತುಳಿತಕ್ಕೆ ಕಾರಣವೆಂದು ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ (ಎಪಿಸಿಸಿ) ಅಧ್ಯಕ್ಷೆ ವೈಎಸ್ ಶರ್ಮಿಳಾ ಆರೋಪಿಸಿದರು. ಘಟನೆಯ ಬಗ್ಗೆ ತಕ್ಷಣ ತನಿಖೆ ನಡೆಸಬೇಕೆಂದು ಒತ್ತಾಯಿಸಿದ ಅವರು, ಸರ್ಕಾರವು ಸಂತ್ರಸ್ಥ ಕುಟುಂಬ ಸದಸ್ಯರ ರಕ್ಷಣೆಗೆ ಬರಬೇಕೆಂದು ಅವರು ಒತ್ತಾಯಿಸಿದರು.
ಏತನ್ಮಧ್ಯೆ, ಎಪಿಸಿಸಿ ಉಪಾಧ್ಯಕ್ಷ ಕೊಲನುಕೊಂಡ ಶಿವಾಜಿ ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಅವರ ತಕ್ಷಣದ ರಾಜೀನಾಮೆಗೆ ಒತ್ತಾಯಿಸಿದರು ಮತ್ತು ಮೃತರ ಕುಟುಂಬ ಸದಸ್ಯರಿಗೆ 50 ಲಕ್ಷ ರೂ. ಪರಿಹಾರ ನೀಡುವಂತೆ ಒತ್ತಾಯಿಸಿದರು. ಅಲ್ಲದೆ ಸಂತ್ರಸ್ತ ಕುಟುಂಬಗಳಲ್ಲಿ ಒಬ್ಬರಿಗೆ ಟಿಟಿಡಿಯಲ್ಲಿ ಉದ್ಯೋಗ ನೀಡಬೇಕು ಎಂದು ಅವರು ಹೇಳಿದರು.
ಮಾಹಿತಿ ಇದ್ದರೂ ಪೂರ್ವ ಮುಂಜಾಗ್ರತೆ ಇರಲಿಲ್ಲ: ಸಿಪಿಎಂ ನಾಯಕ
ಏತನ್ಮಧ್ಯೆ, ಸಿಪಿಎಂ ನಾಯಕರೊಬ್ಬರು ವರ್ಷದ ಈ ಸಮಯದಲ್ಲಿ ಲಕ್ಷಾಂತರ ಜನರು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಎಂದು ತಿಳಿದಿದ್ದರೂ ಟಿಟಿಡಿ ಯಾವುದೇ ಮುಂಜಾಗ್ರತಾ ಕ್ರಮ ವಹಿಸಿರಲಿಲ್ಲ. ಪ್ರತಿದಿನ ಟಿಟಿಡಿ ಅವರು ಚರ್ಚಿಸುತ್ತಿದ್ದರು. ಟಿಟಿಡಿಯಲ್ಲಿ ಏನೋ ನಡೆಯುತ್ತಿದೆ ಎಂದು ತೋರುತ್ತಿತ್ತು, ಆದರೆ ಭಕ್ತರು ಬರುವ ಹೊತ್ತಿಗೆ ಈ ದುರ್ಘಟನೆ ಸಂಭವಿಸಿದೆ. ವೈಕುಂಠ ಏಕಾದಶಿ ಹೊಸ ವಿಷಯವಲ್ಲ ಮತ್ತು ಭಕ್ತರು ಧಾವಿಸಿ ನೂಕಾಟ ನಡೆಸಿದ ಸಂದರ್ಭಗಳು ಈ ಹಿಂದಿನಿಂದಲೂ ಇದ್ದವು. ಆದರೆ ಇಂತಹ ಪರಿಸ್ಥಿತಿ ಎಂದಿಗೂ ಸಂಭವಿಸಿರಲಿಲ್ಲ. ಇದಕ್ಕೆ ಸರ್ಕಾರವೇ ಸಂಪೂರ್ಣ ಹೊಣೆ. ಸರ್ಕಾರದ ಬೇಜವಾಬ್ದಾರಿ ಮತ್ತು ಜಿಲ್ಲಾಡಳಿತದ ವೈಫಲ್ಯದಿಂದಾಗಿ ಈ ಪರಿಸ್ಥಿತಿ ಉದ್ಭವಿಸಿದೆ ಎಂದು ಕಿಡಿಕಾರಿದ್ದಾರೆ.