ನವದೆಹಲಿ: ಮಾನಸಿಕ ಆರೋಗ್ಯದ ಮಹತ್ವದ ಬಗ್ಗೆ ಆಗ್ಗಾಗ್ಗೆ ಜಾಗೃತಿ ಮೂಡಿಸುತ್ತಲೇ ಇರುವ ನಟಿ ದೀಪಿಕಾ ಪಡುಕೋಣೆ, ಭಾನುವಾರದಂದು ಉದ್ಯೋಗಿಗಳು ಕೆಲಸ ಮಾಡುವ ಬಗ್ಗೆ ಎಲ್&ಟಿ ಅಧ್ಯಕ್ಷ ಎಸ್‌ಎನ್ ಸುಬ್ರಹ್ಮಣ್ಯನ್ ನೀಡಿರುವ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ಪತ್ರಕರ್ತ ಫಾಯೆ ಡಿಸೋಜಾ ಅವರ ವರದಿಯ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿರುವ ದೀಪಿಕಾ, 'ಇಂತಹ ಉನ್ನತ ಸ್ಥಾನದಲ್ಲಿರುವವರು ಇಂತಹ ಹೇಳಿಕೆಗಳನ್ನು ನೀಡುವುದನ್ನು ನೋಡಿ ಆಘಾತವಾಗಿದೆ' ಎಂದು ಬರೆದಿದ್ದಾರೆ. ದೀಪಿಕಾ 'ಮೆಂಟಲ್ ಹೆಲ್ತ್ ಮ್ಯಾಟರ್ಸ್' ಎಂಬ ಹ್ಯಾಶ್‌ಟ್ಯಾಗ್ ಸೇರಿಸಿದ್ದಾರೆ.
'ವರ್ಕ್-ಲೈಫ್ ಸಮತೋಲನ ಮತ್ತು ಮಾನಸಿಕ ಆರೋದ್ಯದ ಬಗ್ಗೆ ಇಂಟರ್ನೆಟ್‌ನಲ್ಲಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿದ ಎಸ್‌ಎನ್ ಸುಬ್ರಹ್ಮಣ್ಯನ್ ಅವರ ಹೇಳಿಕೆ ನಂತರ, ಮೂಲಸೌಕರ್ಯ MNC L&T ಹೇಳಿಕೆಯ ಸ್ಕ್ರೀನ್‌ಶಾಟ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ದೀಪಿಕಾ, 'ಮತ್ತು ಅವರು ಈ ಪರಿಸ್ಥಿತಿಯನ್ನು ಇನ್ನಷ್ಟು ಕೆಟ್ಟದಾಗಿ ಮಾಡಿದ್ದಾರೆ...' ಎಂದು ಬರೆದಿದ್ದಾರೆ.
ಕಂಪನಿ ನೀಡಿರುವ ಹೇಳಿಕೆಯಲ್ಲಿ, 'L&T ಯಲ್ಲಿ, ರಾಷ್ಟ್ರ ನಿರ್ಮಾಣವೇ ನಮ್ಮ ಆದ್ಯತೆಯಾಗಿದೆ. ಎಂಟು ದಶಕಗಳಿಂದ ನಾವು ಭಾರತದ ಮೂಲಸೌಕರ್ಯ, ಕೈಗಾರಿಕೆಗಳು ಮತ್ತು ತಾಂತ್ರಿಕ ಸಾಮರ್ಥ್ಯಗಳನ್ನು ರೂಪಿಸುತ್ತಿದ್ದೇವೆ. ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಇದು ಉತ್ತಮ ಸಮಯ ಎಂದು ನಾವು ನಂಬುತ್ತೇವೆ. ಇದಕ್ಕಾಗಿ ಸಾಮೂಹಿಕ ಸಮರ್ಪಣೆ ಮತ್ತು ಪ್ರಯತ್ನ ಅಗತ್ಯವಿದೆ. ಪ್ರಗತಿಯನ್ನು ಹೆಚ್ಚಿಸಲು ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ನಮ್ಮ ದೃಷ್ಟಿಯನ್ನು ಸಾಕಾರಗೊಳಿಸುವ ಪ್ರಯತ್ನ ಇದಾಗಿದೆ' ಎಂದಿದೆ.
ಮುಂದುವರಿದು, ಈ ಹಿನ್ನೆಲೆಯಲ್ಲಿ ಸಂಸ್ಥೆಯ ಅಧ್ಯಕ್ಷರ ಹೇಳಿಕೆಗಳು ದೊಡ್ಡ ಮಹತ್ವಾಕಾಂಕ್ಷೆಯನ್ನು ಪ್ರತಿನಿಧಿಸುತ್ತವೆ ಹಾಗೂ ಉತ್ತಮ ಫಲಿತಾಂಶಗಳಿಗೆ ಅಸಾಧಾರಣ ಪ್ರಯತ್ನದ ಅಗತ್ಯತೆಯನ್ನು ಒತ್ತಿ ಹೇಳಿದೆ. ಎಲ್&ಟಿಯಲ್ಲಿ, ಉತ್ಸಾಹ, ಉದ್ದೇಶ ಮತ್ತು ಕಾರ್ಯಕ್ಷಮತೆ ನಮ್ಮನ್ನು ಮುನ್ನಡೆಸುವ ಸಂಸ್ಕೃತಿಯನ್ನು ಬೆಳೆಸಲು ನಾವು ಬದ್ಧರಾಗಿದ್ದೇವೆ' ಎಂದು ಹೇಳಿದೆ.
ಸಂಸ್ಥೆಯ ಆಂತರಿಕ ಸಭೆಯಲ್ಲಿ ಶನಿವಾರಗಳನ್ನು ಕಡ್ಡಾಯ ಕೆಲಸದ ದಿನವನ್ನಾಗಿಸುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಎಸ್.ಎನ್.ಸುಬ್ರಹ್ಮಣ್ಯನ್, ನಿಮ್ಮನ್ನು ಭಾನುವಾರಗಳಂದು ಕೆಲಸಕ್ಕೆ ತೊಡಗಿಸದಿರುವುದಕ್ಕೆ ವಿಷಾದವಿದೆ. ಭಾನುವಾರದಂದೂ ನೀವು ಕೆಲಸ ಮಾಡುವಂತಾದರೆ ಅದು ನನಗೆ ಹೆಚ್ಚಿನ ಖುಷಿ ಕೊಡುತ್ತದೆ. ಏಕೆಂದರೆ ನಾನೂ ಕೂಡ ಭಾನುವಾರಗಳಂದು ಕೆಲಸ ಮಾಡುತ್ತೇನೆ. ಭಾನುವಾರ ಮನೆಯಲ್ಲಿ ಕುಳಿತು ಏನು ಮಾಡುತ್ತೀರಿ? ಎಷ್ಟು ಸಮಯ ನಿಮ್ಮ ಹೆಂಡತಿಯನ್ನೇ ನೋಡುತ್ತಾ ಕುಳಿತಿರುತ್ತೀರಿ? ಹೆಂಡತಿಯರೂ ಅಷ್ಟೇ ಎಷ್ಟು ಅಂತ ಗಂಡನ ಮುಖ ನೋಡುತ್ತಾ ಕುಳಿತಿರಲು ಸಾಧ್ಯ? ಅದರ ಬದಲು ಕಚೇರಿಗೆ ಬಂದು ಕೆಲಸದಲ್ಲಿ ತೊಡಗಿ ಎಂದು ನೌಕರರಿಗೆ ಕರೆ ನೀಡಿದ್ದಾರೆ.
ಈ ವಿಡಿಯೋವನ್ನು Reddit ನಲ್ಲಿ ಹಂಚಿಕೊಳ್ಳಲಾಗಿದ್ದು, ಕೆಲವೇ ಸಮಯದಲ್ಲಿ ಅದು ವೈರಲ್ ಆಗಿದೆ. ಬಳಿಕ ಸುಬ್ರಹ್ಮಣ್ಯನ್ ಅವರ ಹೇಳಿಕೆಗಳಿಗೆ ತೀವ್ರ ವಿರೋಧ ವ್ಯಕ್ತವಾಗಿದೆ.