ಶಿಮ್ಲಾ: ಹಿಮಾಚಲ ಪ್ರದೇಶದ ಹಮೀರ್‌ಪುರ ಜಿಲ್ಲೆಯ ವ್ಯಕ್ತಿಯೊಬ್ಬರು ಸುಮಾರು ಎರಡು ಬಿಲಿಯನ್ ರೂಪಾಯಿಗಳ ವಿದ್ಯುತ್ ಬಿಲ್ ಪಡೆದಿದ್ದು, ತೀವ್ರ ಆಘಾತಕ್ಕೊಳಗಾಗಿದ್ದಾರೆ.
ಬೆಹೆರ್ವಿನ್ ಜತ್ತನ್ ಗ್ರಾಮದ ಉದ್ಯಮಿ ಲಲಿತ್ ಧಿಮಾನ್ ಅವರು ಡಿಸೆಂಬರ್ 2024ಕ್ಕೆ 2,10,42,08,405 ರೂ. ಮೊತ್ತದ ವಿದ್ಯುತ್ ಬಿಲ್ ಪಡೆದಿದ್ದಾರೆ.
ಧಿಮಾನ್ ಅವರು ತಿಂಗಳ ಹಿಂದೆ ಕೇವಲ 2,500 ರೂ. ವಿದ್ಯುತ್ ಬಿಲ್ ಪಾವತಿಸಿದ್ದರು. ಈ ಬಾರಿ ಊಹೆಗೂ ಮೀರಿದ ಬಿಲ್ ಬಂದಿರುವುದರಿಂದ ವಿದ್ಯುತ್ ಮಂಡಳಿ ಕಚೇರಿಗೆ ತೆರಳಿ ದೂರು ನೀಡಿದ್ದಾರೆ.
ತಾಂತ್ರಿಕ ದೋಷದಿಂದ ಹೆಚ್ಚಿನ ವಿದ್ಯುತ್ ಬಿಲ್ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಂತರ ಅವರ ಬಿಲ್ ಅನ್ನು ಸರಿಪಡಿಸಿ 4,047 ರೂ.ಗೆ ಇಳಿಸಲಾಗಿದೆ ಎಂದು ವರದಿಯಾಗಿದೆ.
ಕಳೆದ ವರ್ಷ, ಗುಜರಾತ್‌ನ ವಲ್ಸಾದ್‌ನಲ್ಲಿ ಟೈಲರ್‌ಗೆ ತನ್ನ ಅಂಗಡಿಯ ಆಸ್ತಿ ಮೌಲ್ಯವನ್ನು ಮೀರಿದ ವಿದ್ಯುತ್ ಬಿಲ್ ಬಂದಿದೆ. ಚಿಕ್ಕಪ್ಪನೊಂದಿಗೆ ಅಂಗಡಿ ನಡೆಸುತ್ತಿದ್ದ ಮುಸ್ಲಿಂ ಅನ್ಸಾರಿ ಎಂಬುವವರಿಗೆ 86 ಲಕ್ಷ ರೂಪಾಯಿ ಮೊತ್ತದ ಬಿಲ್ ಪಡೆದಿದ್ದರು.
ಅನ್ಸಾರಿ ಅವರು ಆಘಾತ ವ್ಯಕ್ತಪಡಿಸಿದ ನಂತರ, ಡಿಕಾಮ್‌ನ ಅಧಿಕಾರಿಗಳು ಅವರ ಅಂಗಡಿಗೆ ಧಾವಿಸಿ ಮೀಟರ್ ಅನ್ನು ಪರಿಶೀಲಿಸಿದರು. ಮೀಟರ್ ರೀಡಿಂಗ್‌ಗೆ ಎರಡು ಅಂಕೆಗಳನ್ನು ತಪ್ಪಾಗಿ ಸೇರಿಸಲಾಗಿರುವುದೇ ಅಧಿಕ ಮೊತ್ತದ ಬಿಲ್ ಬರುವುದಕ್ಕೆ ಕಾರಣ ಎಂದು ತಿಳಿಸಿದ್ದಾರೆ.