ಲಖನೌ: ಉತ್ತರ ಪ್ರದೇಶದ ಕನ್ನೌಜ್‌ನ ರೈಲು ನಿಲ್ದಾಣದಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದ ನಿರ್ಮಾಣ ಹಂತದ ಛಾವಣಿ ಕುಸಿತದಿಂದ ಅವಶೇಷಗಳ ಅಡಿಯಲ್ಲಿ ಸಿಲುಕಿದ ಸುಮಾರು 28 ಜನರನ್ನು ರಕ್ಷಿಸಲಾಗಿದೆ. ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಕಾನ್ಫುರ ಕಮಿಷನರ್ ಕೆ. ವಿಜಯೇಂದ್ರ ಪಾಂಡಿಯನ್ ತಿಳಿಸಿದ್ದಾರೆ.
ಇಲ್ಲಿಯವರೆಗೂ ಯಾವುದೇ ಸಾವು ನೋವಿನ ಬಗ್ಗೆ ವರದಿಯಾಗಿಲ್ಲ. ಇನ್ನೂ ಕೆಲವು ಗಂಟೆಗಳಲ್ಲಿ ಅವಶೇಷಗಳನ್ನು ತೆರವುಗೊಳಿಸಲಾಗುವುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಘಟನಾ ಸ್ಥಳದಲ್ಲಿ ಶ್ವಾನ ದಳದ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇನ್ನೂ ಹಲವು ಮಂದಿ ಅವಶೇಷಗಳಡಿ ಸಿಲುಕಿರುವ ಸಾಧ್ಯತೆಯಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ರಾಜ್ಯ ಸಚಿವ ಅಸೀಮ್ ಅರುಣ್ ಪ್ರಕಾರ, 23 ಜನರನ್ನು ರಕ್ಷಿಸಲಾಗಿದ್ದು, 20 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. 3 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಲಖನೌಗೆ ರವಾನಿಸಲಾಗಿದೆ.
ನಿಲ್ದಾಣದಲ್ಲಿ ಸೌಂದರ್ಯೀಕರಣ ಕಾರ್ಯದ ಸಮಯದಲ್ಲಿ ಈ ಘಟನೆ ಸಂಭವಿಸಿದ್ದು, ಅವಘಡ ನಡೆದ ಸಮಯದಲ್ಲಿ ಸುಮಾರು 30–35 ಕಾರ್ಮಿಕರು ಸ್ಥಳದಲ್ಲಿ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದರು ಎನ್ನಲಾಗಿದೆ.