ದೆಹಲಿಯ ಭಾರತ್ ಮಂಟಪದಲ್ಲಿ ಆರಂಭಗೊಂಡಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದರು. 
ದೇಶ

ಭಾರತ ದೇಶವು ಮೊಬಿಲಿಟಿ ವಲಯದಲ್ಲಿ ಹೂಡಿಕೆಗೆ ಅತ್ಯುತ್ತಮ ತಾಣ: ಪ್ರಧಾನಿ ಮೋದಿ

ಈ ಉಪಕ್ರಮವು ಪಿಎಲ್ಐ (ಉತ್ಪಾದನಾ ಸಂಬಂಧಿತ ಪ್ರೋತ್ಸಾಹಕ) ಯೋಜನೆಯಿಂದ ಉತ್ತೇಜನ ಪಡೆದಿದ್ದು, ಇದು ಈ ವಲಯದಲ್ಲಿ 2.25 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮಾರಾಟಕ್ಕೆ ಸಹಾಯ ಮಾಡಿದೆ.

ನವದೆಹಲಿ: ಮೊಬಿಲಿಟಿ ವಲಯ(Mobility sector)ದಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಬಯಸುವ ಪ್ರತಿಯೊಬ್ಬ ಹೂಡಿಕೆದಾರರಿಗೆ ಭಾರತವು ಅತ್ಯುತ್ತಮ ತಾಣವಾಗಿದೆ ಎಂದು ಹೇಳಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೂಡಿಕೆದಾರರಿಗೆ ಸರ್ಕಾರ ಎಲ್ಲಾ ರೀತಿಯಲ್ಲಿ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದ್ದಾರೆ.

ದೆಹಲಿಯ ಭಾರತ್ ಮಂಟಪದಲ್ಲಿ ಇಂದು 'ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025' ನ್ನು ಉದ್ಘಾಟಿಸಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತವು ಹಸಿರು ತಂತ್ರಜ್ಞಾನ, ಎಲೆಕ್ಟ್ರಿಕ್ ವಾಹನಗಳು, ಹೈಡ್ರೋಜನ್ ಇಂಧನ ಮತ್ತು ಜೈವಿಕ ಇಂಧನಗಳ ಅಭಿವೃದ್ಧಿಯತ್ತ ಗಮನ ಹರಿಸುತ್ತಿದೆ ಎಂದು ಹೇಳಿದರು.

'ಮೇಕ್ ಇನ್ ಇಂಡಿಯಾ' ಉಪಕ್ರಮದ ಬಲವು ದೇಶದ ಆಟೋ ಉದ್ಯಮದ ಬೆಳವಣಿಗೆಯ ನಿರೀಕ್ಷೆಗಳನ್ನು ಹೆಚ್ಚಿಸುತ್ತದೆ ಎಂದು ಒತ್ತಿ ಹೇಳಿದ ಪ್ರಧಾನ ಮಂತ್ರಿಗಳು, ಈ ದಶಕದ ಅಂತ್ಯದ ವೇಳೆಗೆ ಎಲೆಕ್ಟ್ರಿಕ್ ವಾಹನಗಳ ಮಾರಾಟ ದೇಶದಲ್ಲಿ ಎಂಟು ಪಟ್ಟು ಹೆಚ್ಚಾಗಲಿದೆ ಎಂದರು.

ಆರ್ಥಿಕತೆ ಮತ್ತು ಪರಿಸರ ವಿಜ್ಞಾನವನ್ನು ಬೆಂಬಲಿಸುವ ಮತ್ತು ಪಳೆಯುಳಿಕೆ ಇಂಧನಗಳ ಆಮದಿನ ಮೇಲಿನ ದೇಶದ ಅವಲಂಬನೆಯನ್ನು ಕಡಿಮೆ ಮಾಡುವ ವ್ಯವಸ್ಥೆಯನ್ನು ರಚಿಸುವ ಮೊಬಿಲಿಟಿ ವಲಯಕ್ಕೆ ಸರ್ಕಾರ ಹೆಚ್ಚಿನ ಒತ್ತು ನೀಡಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಮೇಕ್ ಇನ್ ಇಂಡಿಯಾ

'ಮೇಕ್ ಇನ್ ಇಂಡಿಯಾ' ಉಪಕ್ರಮವು ಆಟೋ ಉದ್ಯಮದ ಅಭಿವೃದ್ಧಿಯಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆ ಎಂದು ಹೇಳಿದರು. ಈ ಉಪಕ್ರಮವು ಪಿಎಲ್ಐ (ಉತ್ಪಾದನಾ ಸಂಬಂಧಿತ ಪ್ರೋತ್ಸಾಹಕ) ಯೋಜನೆಯಿಂದ ಉತ್ತೇಜನ ಪಡೆದಿದ್ದು, ಇದು ಈ ವಲಯದಲ್ಲಿ 2.25 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮಾರಾಟಕ್ಕೆ ಸಹಾಯ ಮಾಡಿದೆ. ಇದರಿಂದ ಆಟೋಮೊಬೈಲ್ ವಲಯದಲ್ಲಿ 1.5 ಲಕ್ಷಕ್ಕೂ ಹೆಚ್ಚು ನೇರ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದರು.

ಸುಲಭ ಪ್ರಯಾಣವು ಇತ್ತೀಚಿನ ದಿನಗಳಲ್ಲಿ ಭಾರತದ ದೊಡ್ಡ ಆದ್ಯತೆಯಾಗಿದೆ. ಕಳೆದ ಬಜೆಟ್‌ನಲ್ಲಿ, ದೇಶದ ಮೂಲಸೌಕರ್ಯ ಅಭಿವೃದ್ಧಿಗಾಗಿ 11 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಒದಗಿಸಲಾಗಿದೆ. ಬಹುಪಥಗಳು ಮತ್ತು ಹೆದ್ದಾರಿಗಳ ಜಾಲವನ್ನು ವಿಸ್ತರಿಸಲಾಗಿದೆ ಎಂದು ಹೇಳಿದರು.

ಭಾರತದ ವಾಹನ ಉದ್ಯಮ ವಲಯವು ಅದ್ಭುತವಾಗಿದ್ದು ಭವಿಷ್ಯಕ್ಕೆ ಸಿದ್ಧವಾಗಿದೆ. ಕಳೆದ ವರ್ಷ ಭಾರತದ ಆಟೋ ಉದ್ಯಮವು ಶೇಕಡಾ 12 ರಷ್ಟು ವಾರ್ಷಿಕ ಬೆಳವಣಿಗೆಯನ್ನು ಕಂಡಿತ್ತು. ರಫ್ತಿನಲ್ಲಿ ಕೂಡ ಗಮನಾರ್ಹ ಏರಿಕೆ ಕಂಡುಬಂತು ಎಂದರು.

ಭಾರತದಲ್ಲಿ ಹೂಡಿಕೆ ಮಾಡಿ

ಕಾರ್ಪೊರೇಟರ್ ಗಳು ವಾಹನ ಉದ್ಯಮ ವಲಯದಲ್ಲಿ ಹೆಚ್ಚೆಚ್ಚು ಹೂಡಿಕೆ ಮಾಡಿ ಎಂದು ಉತ್ತೇಜಿಸಿದ ಪ್ರಧಾನ ಮಂತ್ರಿಗಳು ಹೆಚ್ಚುತ್ತಿರುವ ಮಧ್ಯಮ ವರ್ಗ, ತ್ವರಿತ ನಗರೀಕರಣ, ಉತ್ತಮ ಗುಣಮಟ್ಟದ ಮೂಲಸೌಕರ್ಯ ಅಭಿವೃದ್ಧಿ ಮತ್ತು ಕೈಗೆಟುಕುವ ವಾಹನಗಳು ಆಟೋಮೊಬೈಲ್ ವಲಯವನ್ನು ಉತ್ತೇಜಿಸಲಿವೆ ಎಂದರು.

ಚಲನಶೀಲತೆಗಾಗಿ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಪ್ರಯತ್ನವಾಗಿದೆ ಎಂದರು. ಭಾರತದಲ್ಲಿ ಬ್ಯಾಟರಿ ಶೇಖರಣಾ ವ್ಯವಸ್ಥೆಯಲ್ಲಿ ಹೂಡಿಕೆ ಮಾಡಲು ಇದು ಸೂಕ್ತ ಸಮಯ ಎಂದರು.

ದೆಹಲಿಯ ಭಾರತ್ ಮಂಟಪ ಮತ್ತು ಯಶೋಭೂಮಿ ಮತ್ತು ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್‌ಪೋ ಸೆಂಟರ್ ಮತ್ತು ಮಾರ್ಟ್ ಎಂಬ ಮೂರು ಸ್ಥಳಗಳಲ್ಲಿ ನಡೆಯುತ್ತಿರುವ ಐದು ದಿನಗಳ ಪ್ರದರ್ಶನವು ಆಟೋಮೊಬೈಲ್‌ಗಳು, ಘಟಕ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳಲ್ಲಿ 100 ಕ್ಕೂ ಹೆಚ್ಚು ಹೊಸ ಆರಂಭಗಳಿಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ.

ಇಂದಿನಿಂದ ಜನವರಿ 22ರವರೆಗೆ ನಡೆಯಲಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025, ಆಟೋಮೊಬೈಲ್ ತಯಾರಕರಿಂದ ಘಟಕಗಳು, ಎಲೆಕ್ಟ್ರಾನಿಕ್ಸ್ ಭಾಗಗಳು, ಟೈರ್ ಮತ್ತು ಇಂಧನ ಸಂಗ್ರಹ ತಯಾರಕರು ಮತ್ತು ಆಟೋಮೋಟಿವ್ ಸಾಫ್ಟ್‌ವೇರ್ ಸಂಸ್ಥೆಗಳು ಮತ್ತು ವಸ್ತುಗಳ ಮರುಬಳಕೆದಾರರವರೆಗೆ ಚಲನಶೀಲ ಪರಿಸರ ವ್ಯವಸ್ಥೆಯ ಸಂಪೂರ್ಣ ಮೌಲ್ಯ ಸರಪಳಿಯನ್ನು ಒಂದೇ ಸೂರಿನಡಿ ತರುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT