ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಜಗತ್ತಿನ ಅತ್ಯಂತ ದೊಡ್ಡ ಧಾರ್ಮಿಕ ಕಾರ್ಯಕ್ರಮ 'ಮಹಾಕುಂಭ ಮೇಳದ ವೇಳೆ ರಾಜಸ್ಥಾನದ ಸಿಎಂ ಭಜನ್ ಲಾಲ್ ಶರ್ಮಾ ಅವರು ಪವಿತ್ರ ಸಂಗಮದಲ್ಲಿ ಭಾನುವಾರ ಸ್ನಾನ ಮಾಡಿದ್ದಾರೆ. ಬಳಿಕ ಹನುಮಾನ್ ದೇಗುಲಕ್ಕೂ ತೆರಳಿ ಪೂಜೆ ಸಲ್ಲಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ರಾಜಸ್ಥಾನ ಸಿಎಂ, ಪ್ರಯಾಗರಾಜ್‌ನಲ್ಲಿನ ನಂಬಿಕೆ, ಭಕ್ತಿ ಮತ್ತು ಐಕ್ಯತೆಯ ಮಹಾ ಸಂಗಮವಾದ 'ಮಹಾಕುಂಭ-2025' ರಲ್ಲಿ ಪವಿತ್ರ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವ ಅನನ್ಯ ಸೌಕರ್ಯ ನನಗೆ ಸಿಕ್ಕಿತು. ನಂತರ ಲೇತೆ ಹುಯೇ ಹನುಮಾನ್ ಮಹಾರಾಜರ ದಿವ್ಯ ದರ್ಶನ ಪಡೆದು ಪೂರ್ಣ ವಿಧಿವಿಧಾನಗಳೊಂದಿಗೆ ಪೂಜಿಸಿ, ರಾಜ್ಯದ ಸಮಸ್ತ ಜನತೆಯ ಸುಖ, ಸಮೃದ್ಧಿ, ಐಶ್ವರ್ಯ, ಆರೋಗ್ಯಯುತ ಜೀವನಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಯಿತು ಎಂದು ಬರೆದುಕೊಂಡಿದ್ದಾರೆ.
ಪ್ರಯಾಗ್‌ರಾಜ್‌ನಲ್ಲಿರುವ ರಾಜಸ್ಥಾನ ಮಂಟಪದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 'ಮನ್ ಕಿ ಬಾತ್' ಕಾರ್ಯಕ್ರಮವನ್ನು ಆಲಿಸಿದ್ದೇನೆ. ಇದರಲ್ಲಿ ಪ್ರಧಾನ ಮಂತ್ರಿ, ದೇಶದ ಪ್ರಸ್ತುತ ಪರಿಸ್ಥಿತಿಗಳ ಮೇಲೆ ಬೆಳಕು ಚೆಲ್ಲಿದರು ಮಾತ್ರವಲ್ಲದೆ, ಭಾರತದ ಉಜ್ವಲ ಭವಿಷ್ಯದ ರೂಪುರೇಷೆಯನ್ನೂ ಪ್ರಸ್ತುತಪಡಿಸಿದರು. ರಾಷ್ಟ್ರ ನಿರ್ಮಾಣಕ್ಕಾಗಿ ಸಾಮೂಹಿಕ ಪ್ರಯತ್ನಗಳು ಮತ್ತು ಸಾರ್ವಜನಿಕ ಸಹಭಾಗಿತ್ವದ ಅಗತ್ಯಕ್ಕೆ ಅವರು ವಿಶೇಷ ಒತ್ತು ನೀಡಿದರು ಎಂದು ರಾಜಸ್ಥಾನ ಸಿಎಂ ಹೇಳಿದ್ದಾರೆ.