ರೈಲು ಡಿಕ್ಕಿ ಹೊಡೆದು ಹಲವಾರು ಪ್ರಯಾಣಿಕರು ಮೃತಪಟ್ಟ ನಂತರ ಜನರು ಸ್ಥಳದಲ್ಲಿ ಜಮಾಯಿಸಿದರು. 
ದೇಶ

ಜಲಗಾಂವ್ ರೈಲು ಅಪಘಾತ: ತಿರುವಿನ ಕಾರಣ ಕರ್ನಾಟಕ ಎಕ್ಸ್‌ಪ್ರೆಸ್‌ ಗೆ ತುರ್ತು ಬ್ರೇಕಿಂಗ್ ಕಷ್ಟವಾಗಿತ್ತು; ಮೃತರ ಸಂಖ್ಯೆ 13ಕ್ಕೆ ಏರಿಕೆ

ಎರಡೂ ರೈಲುಗಳ ಚಾಲಕರು ಶಿಷ್ಟಾಚಾರವನ್ನು ಪಾಲಿಸಿ ಅಪಘಾತ ತಪ್ಪಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದರು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈ: ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ ಕನಿಷ್ಠ 13 ಪ್ರಯಾಣಿಕರು ಮೃತಪಟ್ಟ ಕರ್ನಾಟಕ ಎಕ್ಸ್‌ಪ್ರೆಸ್ ರೈಲು ದುರಂತಕ್ಕೆ ಹಳಿಯ ತಿರುವಿನಿಂದಾಗಿ ಸರಿಯಾಗಿ ಕಾಣಿಸದೆ ದುರಂತ ಸಂಭವಿಸಿತು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ವದಂತಿ ಹಬ್ಬಿ ಲಕ್ನೋ-ಸಿಎಸ್‌ಎಂಟಿ ಪುಷ್ಪಕ್ ಎಕ್ಸ್‌ಪ್ರೆಸ್‌ನ ಪ್ರಯಾಣಿಕರು ಭೀತಿಯಿಂದ ಹಳಿ ಮೇಲೆ ಹಾರಿದರು. ಪಕ್ಕದ ಹಳಿಗಳಲ್ಲಿ ಕರ್ನಾಟಕ ಎಕ್ಸ್‌ಪ್ರೆಸ್ ರೈಲು ಹರಿದು ಬಂದು 13 ಪ್ರಯಾಣಿಕರು ಮೃತಪಟ್ಟು ಹದಿನೈದು ಜನರು ಗಾಯಗೊಂಡರು.

ಎರಡೂ ರೈಲುಗಳ ಚಾಲಕರು ಶಿಷ್ಟಾಚಾರವನ್ನು ಪಾಲಿಸಿ ಅಪಘಾತ ತಪ್ಪಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದರು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈನಿಂದ 400 ಕಿ.ಮೀ.ಗಿಂತಲೂ ಹೆಚ್ಚು ದೂರದಲ್ಲಿರುವ ಪಚೋರಾ ಬಳಿಯ ಮಹೇಜಿ ಮತ್ತು ಪರ್ಧಾಡೆ ನಿಲ್ದಾಣಗಳ ನಡುವೆ ರೈಲು ನಿಂತಾಗ ಲಕ್ನೋ-ಸಿಎಸ್‌ಎಂಟಿ ಪುಷ್ಪಕ್ ಎಕ್ಸ್‌ಪ್ರೆಸ್‌ನ ಚಾಲಕ ನಿಯಮದ ಪ್ರಕಾರ ಫ್ಲ್ಯಾಷರ್ ಲೈಟ್ ನ್ನು ಆನ್ ಮಾಡಿದ್ದರು ಎಂದು ಕೇಂದ್ರ ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪುಷ್ಪಕ್ ಎಕ್ಸ್‌ಪ್ರೆಸ್‌ನ ಫ್ಲ್ಯಾಷರ್ ಲೈಟ್ ಸಿಗ್ನಲ್ ನೋಡಿದ ನಂತರ ಕರ್ನಾಟಕ ಎಕ್ಸ್‌ಪ್ರೆಸ್ ಚಾಲಕ ಬ್ರೇಕ್ ಹಾಕಿದರು. ತಿರುವಿನ ಕಾರಣ ಸರಿಯಾಗಿ ಕಾಣದ್ದರಿಂದ ಕರ್ನಾಟಕ ಎಕ್ಸ್‌ಪ್ರೆಸ್ ಅನ್ನು ತುರ್ತು ಬ್ರೇಕ್ ಹಾಕಿ ನಿಲ್ಲಿಸುವುದು ಕಷ್ಟವಾಗಿದೆ ಎಂದು ಪ್ರಾಥಮಿಕ ಮಾಹಿತಿಯನ್ನು ಉಲ್ಲೇಖಿಸಿ ಅಧಿಕಾರಿ ಹೇಳಿದರು.

ಈ ವಿಭಾಗದಲ್ಲಿ ರೈಲುಗಳು ಗಂಟೆಗೆ 100 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ಚಲಿಸುತ್ತವೆ. ನಿನ್ನೆ ಪುಷ್ಪಕ್ ಎಕ್ಸ್‌ಪ್ರೆಸ್‌ನಲ್ಲಿದ್ದ ಪ್ರಯಾಣಿಕರು ಬೆಂಕಿಯ ಭಯದಿಂದ ಪಕ್ಕದ ಹಳಿಗಳಿಗೆ ಆತುರದಿಂದ ಹಾರಿದಾಗ ಬೆಂಗಳೂರಿನಿಂದ ದೆಹಲಿಗೆ ಹೋಗುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್ ರೈಲಿನ ಕೆಳಗೆ ಸಿಲುಕಿದಾಗ ಈ ದುರಂತ ಸಂಭವಿಸಿದೆ ಎಂದು ಅವರು ವಿವರಿಸಿದ್ದಾರೆ.

ಉತ್ತರ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಪಚೋರಾ ಪಟ್ಟಣದ ಬಳಿಯ ಮಾಹೆಜಿ ಮತ್ತು ಪರ್ಧಾಡೆ ನಿಲ್ದಾಣಗಳ ನಡುವೆ ನಿನ್ನೆ ಸಂಜೆ 4.45 ರ ಸುಮಾರಿಗೆ ಪ್ರಯಾಣಿಕರು ಸರಪಳಿ ಎಳೆದ ನಂತರ ಪುಷ್ಪಕ್ ಎಕ್ಸ್‌ಪ್ರೆಸ್ ನಿಂತಾಗ ಈ ಘಟನೆ ಸಂಭವಿಸಿದೆ.

ಮೃತರ ಸಂಖ್ಯೆ 13ಕ್ಕೆ ಏರಿಕೆ: ಜಲಗಾಂವ್ ರೈಲು ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಂಬೈಗೆ ತೆರಳುತ್ತಿದ್ದ ಪುಷ್ಪಕ್ ಎಕ್ಸ್‌ಪ್ರೆಸ್‌ನ ಕೆಲವು ಪ್ರಯಾಣಿಕರು ನಿನ್ನೆ ಸಂಜೆ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಪಕ್ಕದ ಹಳಿಗಳಲ್ಲಿ ಬೆಂಗಳೂರಿನಿಂದ ದೆಹಲಿಗೆ ಹೋಗುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್‌ಗೆ ಸಿಲುಕಿ ಮೃತಪಟ್ಟಿದ್ದಾರೆ. 13 ಜನರಲ್ಲಿ, ಇಲ್ಲಿಯವರೆಗೆ ಎಂಟು ಶವಗಳನ್ನು ಗುರುತಿಸಿದ್ದೇವೆ, ಅವುಗಳಲ್ಲಿ ಇಬ್ಬರನ್ನು ಅವರ ಆಧಾರ್ ಕಾರ್ಡುಗಳಿಂದ ಗುರುತಿಸಲಾಗಿದೆ ಎಂದು ವಿಶೇಷ ಪೊಲೀಸ್ ಮಹಾನಿರ್ದೇಶಕ ದತ್ತಾತ್ರಯ ಕರಾಳೆ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಗುರುತಿಸಲಾದ ಎಂಟು ಮೃತರಲ್ಲಿ ನೇಪಾಳದ ನಾಲ್ವರು ಸೇರಿದ್ದಾರೆ ಎಂದು ಜಲಗಾಂವ್ ಜಿಲ್ಲಾ ಮಾಹಿತಿ ಅಧಿಕಾರಿ ಯುವರಾಜ್ ಪಾಟೀಲ್ ತಿಳಿಸಿದ್ದಾರೆ.

ಅಧಿಕಾರಿಗಳು ಒದಗಿಸಿದ ಪಟ್ಟಿಯ ಪ್ರಕಾರ, ನೇಪಾಳದ ನಾಲ್ವರನ್ನು ಕಮಲಾ ನವೀನ್ ಭಂಡಾರಿ (43) (ಮುಂಬೈನ ಕೊಲಾಬಾದಲ್ಲಿ ವಾಸಿಸುತ್ತಿದ್ದರು), ಜವಕಲಾ ಭಾಟೆ (60) (ಥಾಣೆಯ ಭಿವಂಡಿಯಲ್ಲಿ ವಾಸಿಸುತ್ತಿದ್ದರು), ಲಚ್ಚಿರಾಮ್ ಖತಾರು ಪಾಸಿ (40) ಮತ್ತು ಇಮ್ತಿಯಾಜ್ ಅಲಿ (11) ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಗಾಯಗೊಂಡ 15 ಜನರಲ್ಲಿ 10 ಜನರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂಬತ್ತು ಮಂದಿ ಪಚೋರಾ ಸಿವಿಲ್ ಆಸ್ಪತ್ರೆಯಲ್ಲಿ ಮತ್ತು ಒಬ್ಬರು ಜಲಗಾಂವ್ ನಗರದ ವೈದ್ಯಕೀಯ ಸೌಲಭ್ಯದಲ್ಲಿ. ಉಳಿದವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಈ ಮಧ್ಯೆ ಲಕ್ನೋ-ಮುಂಬೈ ಪುಷ್ಪಕ್ ಎಕ್ಸ್‌ಪ್ರೆಸ್ ಇಂದು ನಸುಕಿನ ಜಾವ 1.20 ರ ಸುಮಾರಿಗೆ ಮಹಾರಾಷ್ಟ್ರ ರಾಜಧಾನಿಯಲ್ಲಿರುವ ತನ್ನ ಅಂತಿಮ ನಿಲ್ದಾಣ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ತಲುಪಿದೆ ಎಂದು ರೈಲ್ವೆ ವಕ್ತಾರರು ತಿಳಿಸಿದ್ದಾರೆ.

ಕೇಂದ್ರ ರೈಲ್ವೆಯ ಜನರಲ್ ಮ್ಯಾನೇಜರ್ ಮತ್ತು ಇತರ ಹಿರಿಯ ಅಧಿಕಾರಿಗಳು ನಿನ್ನೆ ರಾತ್ರಿ ಅಪಘಾತ ಸ್ಥಳಕ್ಕೆ ತಲುಪಿ ಸ್ಥಳವನ್ನು ಪರಿಶೀಲಿಸಿದರು.

ದುರಂತದಲ್ಲಿ ಮೃತಪಟ್ಟ ಪ್ರಯಾಣಿಕರ ಹತ್ತಿರದ ಸಂಬಂಧಿಕರಿಗೆ ತಲಾ 5 ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡುವುದಾಗಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ. ರೈಲ್ವೆ ಮಂಡಳಿಯು ಮೃತರ ಕುಟುಂಬಕ್ಕೆ ತಲಾ 1.5 ಲಕ್ಷ ರೂಪಾಯಿಗಳ ಪರಿಹಾರ, ಗಂಭೀರ ಗಾಯಗಳಿಗೆ 50,000 ರೂಪಾಯಿಗಳ ಪರಿಹಾರ ಮತ್ತು ಸಾಮಾನ್ಯ ಗಾಯಗಳಿಗೆ 5,000 ರೂಪಾಯಿಗಳ ಪರಿಹಾರವನ್ನು ಪ್ರತ್ಯೇಕವಾಗಿ ಘೋಷಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

SCROLL FOR NEXT