ನವದೆಹಲಿ: ಬಾಂಗ್ಲಾದೇಶಿ ವಲಸಿಗರು ಒಂದು ವೇಳೆ ಭಾರತಕ್ಕೆ ಬರಲು ಬಯಸಿದರೆ, ಅದು ಅಕ್ರಮವಾಗಿದ್ದರೂ ಸಹ ನಾವು ಎಲ್ಲರನ್ನೂ ಸೇರಿಸಿಕೊಳ್ಳಬೇಕು ಎಂದು ಹೇಳುವ ಮೂಲಕ ವಿಪಕ್ಷ ನಾಯಕ ರಾಹುಲ್ ಗಾಂಧಿ ಆಪ್ತ ಸಹಾಯಕ ಸ್ಯಾಮ್ ಪಿತ್ರೋಡಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ನಡುವೆ ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಈ ಹೇಳಿಕೆ ರಾಜಕೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಬಾಂಗ್ಲಾದೇಶಿಗರು ಇಲ್ಲಿಗೆ ಬರಲು ಬಯಸಿದರೆ, ಅಕ್ರಮವಾಗಿಯಾದರೂ, ಅವರು ಬರಲಿ. ನಾವು ಎಲ್ಲರನ್ನೂ ಸೇರಿಸಿಕೊಳ್ಳಬೇಕು. ನಮಗೆ ಅದರಿಂದ ಸ್ವಲ್ಪ ಕಷ್ಟವಾದರೂ ಪರವಾಗಿಲ್ಲ, ಸಹಿಸಿಕೊಳ್ಳಬೇಕು ಎಂದು ಹೇಳುವ ಮೂಲಕ ವಲಸಿಗರು ಭಾರತದಲ್ಲಿ ನೆಲೆಸಬೇಕೆಂದು ಪ್ರತಿಪಾದಿಸಿದ್ದು ಈ ಸಮಸ್ಯೆಯನ್ನು ಪರಿಹರಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು.
ಅಕ್ರಮ ವಲಸಿಗರ ವಿರುದ್ಧ ಕೇಂದ್ರ ಸರ್ಕಾರದ ಕಠಿಣ ಕ್ರಮವನ್ನು ಟೀಕಿಸಿದ ಪಿತ್ರೋಡಾ, ಸರ್ಕಾರವು ವಲಸೆಯನ್ನು ನಿಭಾಯಿಸುವ ಬದಲು ಜಾಗತಿಕ ತಾಪಮಾನದ ಏರಿಕೆಯಂತಹ ಸಾರ್ವಜನಿಕರಿಗೆ ಮುಖ್ಯವಾದ ಸಮಸ್ಯೆಗಳನ್ನು ಪರಿಹರಿಸುವತ್ತ ಹೆಚ್ಚು ಗಮನಹರಿಸಬೇಕು ಎಂದು ಒತ್ತಿ ಹೇಳಿದ್ದಾರೆ.
ಫೆಬ್ರವರಿ 5ರ ದೆಹಲಿ ವಿಧಾನಸಭಾ ಚುನಾವಣೆಗೂ ಮುನ್ನ ಸ್ಯಾಮ್ ಪಿತ್ರೋಡಾರ ಈ ಹೇಳಿಕೆ ರಾಜಕೀಯ ಪಕ್ಷಗಳು ಅಸ್ತ್ರವಾಗಿ ಬಳಸಿಕೊಳ್ಳುತ್ತಿವೆ. ಆಡಳಿತಾರೂಢ ಎಎಪಿ ಬಾಂಗ್ಲಾದೇಶಿ ನುಸುಳುಕೋರರಿಗೆ ನಕಲಿ ಆಧಾರ್ ಕಾರ್ಡ್‌ಗಳನ್ನು ಸೃಷ್ಟಿಸುವಲ್ಲಿ ಭಾಗಿಯಾಗಿದೆ ಎಂದು ಬಿಜೆಪಿ ಆರೋಪಿಸಿದ್ದು ದೆಹಲಿಯ ಆಡಳಿತ ಪಕ್ಷವು ಮುಂಬರುವ ಚುನಾವಣೆಗಳಿಗೆ ಅವರನ್ನು "ಮತ ಬ್ಯಾಂಕ್" ಆಗಿ ಬಳಸುತ್ತಿದೆ ಎಂದು ಆರೋಪಿಸಿದೆ.